ವಕೀಲರು ಕೌಶಲ್ಯವನ್ನು ಸುಧಾರಿಸಿಕೊಳ್ಳುವುದು ಅಗತ್ಯ: ನ್ಯಾ.ಇಂದಿರೇಶ್
ಉಡುಪಿ, ನ.18: ನ್ಯಾಯಾಂಗವು ಸಾಮಾಜಿಕ ಕಾಳಜಿಯಿಂದ ಸಾರ್ವ ಜನಿಕರಿಗೆ ಒಳಿತನ್ನು ಮಾಡುತ್ತದೆ. ಸಾಕ್ಷ್ಯಾಧಾರ ಹಾಗೂ ಎಲೆಕ್ಟ್ರಾನಿಕ್ ಕಾಯಿದೆ ಯಂತಹ ವಿಷಯಗಳ ಕುರಿತ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವುದರಿಂದ ಯುವ ವಕೀಲರು ಹಾಗೂ ಕಾನೂನು ವಿದ್ಯಾರ್ಥಿಗಳಲ್ಲಿ ಹೊಸ ದೃಷ್ಠಿಕೋನ ಮೂಡಲು ಸಾಧ್ಯ. ವಕೀಲರು ತಮ್ಮ ಕೌಶಲ್ಯವನ್ನು ಸುಧಾರಿಸಿಕೊಳ್ಳಬೇಕು ಎಂದು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳಿದ್ದಾರೆ.
ಉಡುಪಿ ವಕೀಲರ ಸಂಘದ ವತಿಯಿಂದ ಉಡುಪಿ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಸೋಮವಾರ ನಡೆದ ಎರಡು ದಿನಗಳ ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ 125ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದ ಅವರು ಸಮಾರೋಪ ಭಾಷಣ ಮಾಡಿದರು.
ಯುವ ವಕೀಲರು ಮುಂದಿನ ದಿನಗಳಲ್ಲಿ ಉತ್ತಮ ಹಿರಿಯ ವಕೀಲ, ನ್ಯಾಯಧೀಶರುಗಳಾಗಿ, ಸುಪ್ರೀಂಕೋರ್ಟ್‌ನ ನ್ಯಾಯಧೀಶರಾಗುವ ಕನಸನ್ನು ಕಂಡು, ಅದನ್ನು ನನಸಾಗಿಸುವತ್ತಾ ಹೆಜ್ಜೆ ಹಾಕಬೇಕು ಎಂದ ಅವರು, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆ ವಕೀಲರನ್ನು ಯಶಸ್ವಿ ಹಾದಿಯಲ್ಲಿ ಮುನ್ನಡೆಸುತ್ತದೆ. ಈ ವೃತ್ತಿ ಬಹಳ ಗೌರವಯುತವಾದ ವೃತ್ತಿಯಾಗಿದೆ. ನಾವು ಕಕ್ಷಿದಾರರ ದುಃಖವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಹೈಕೋರ್ಟ್ ನ್ಯಾಯಾಮೂರ್ತಿ ಸಿ.ಎಂ.ಜೋಷಿ ಮಾತನಾಡಿ, ತಂತ್ರಜ್ಞಾನ ಸಾಕಷ್ಟು ಮುಂದುವರಿಯುತ್ತಿದೆ. ವಕೀಲ ವೃತ್ತಿ ಮುಂದಿನ ದಿನಗಳಲ್ಲಿ ಇದೇ ರೀತಿ ಸಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಲವು ಕಾರಣಗಳಿಗಾಗಿ ವೃತ್ತಿಯ ಆಯಾಮ ಬದಲಾಗುತ್ತದೆ. ಈ ಬಗ್ಗೆ ಚಿಂತನೆ ಮಾಡುವ ಅಗತ್ಯಇದೆ. ಆದುದರಿಂದ ನಮ್ಮಲ್ಲಿರುವ ಕೌಶಲ್ಯವನ್ನು ಮತ್ತೆ ಮತ್ತೆ ವೃದ್ಧಿಸುತ್ತಿರಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಹೈಕೋರ್ಟ್ ನ್ಯಾಯಾಮೂರ್ತಿ ಟಿ.ಜಿ.ಶಿವಶಂಕರೇ ಗೌಡ ಮಾತನಾಡಿ, ಹಿರಿಯ ವಕೀಲರ ತರಬೇತಿಯ ಪರಿಣಾಮ ನಾವೆಲ್ಲ ನ್ಯಾಯಾಧೀಶ ರಾಗಲು ಸಾಧ್ಯವಾಗಿದೆ. ಅದೇ ರೀತಿ ನ್ಯಾಯಾಧೀಶರಿಗೆ ಕಿರಿಯ ವಕೀಲರನ್ನು ತರ ಬೇತಿ ಮಾಡುವ ಜವಾಬ್ದಾರಿ ಇದೆ. ಆ ಮೂಲಕ ಅವರನ್ನು ಹಿರಿಯ ವಕೀಲರನ್ನಾಗಿ ಮಾಡಿದರೆ ಮುಂದೆ ಒಳ್ಳೆಯ ರೀತಿಯ ನ್ಯಾಯಾಧೀಶರನ್ನು ಹುಟ್ಟು ಹಾಕಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳ ಮ್ಯಾಜಿಸ್ಟ್ರೇಟರ್ ಗಳು ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಮ್ಯಾಜಿಸ್ಟ್ರೇಟರ್‌ಗಳು ತಾಳುವ ಕಠಿಣ ನಿಲುವುಗಳಿಂದ ಯುವ ವಕೀಲರ ಬೆಳವಣಿಗೆಗೆ ಹೊಡೆತ ಬೀಳುತ್ತದೆ. ಹೀಗಾಗಿ ಮ್ಯಾಜಿಸ್ಟ್ರೇಟರ್ ಗಳು ಕಾನೂನಿನ ವ್ಯಾಪ್ತಿಯೊಳಗೆ ವಕೀಲರನ್ನೂ ಪ್ರೋತ್ಸಾಹಿಸಿ ನ್ಯಾಯದಾನವನ್ನು ಮಾಡಬೇಕು ಎಂದರು.
ಹೈಕೋರ್ಟ್ ನ್ಯಾಯಾಮೂರ್ತಿ ಶಿವಶಂಕರ್ ಬಿ.ಅಮರಣ್ಣವರ್, ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್ ಮಾತನಾಡಿದರು. ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಶತಮಾನೋತ್ತರ ರಜತ ಮಹೋತ್ಸವ ಸಮಿತಿಯ ಪದಾಧಿಕಾರಿ ಗಳಾದ ಎ.ಸಂಜೀವ, ಎಂ.ಶಾಂತರಾಮ್ ಶೆಟ್ಟಿ, ಬಿ.ನಾಗರಾಜ್, ಸತೀಶ್ ಪೂಜಾರಿ, ಸುಮಿತ್ ಹೆಗ್ಡೆ, ಮಿತ್ರಕುಮಾರ್ ಶೆಟ್ಟಿ, ಅಸಾದುಲ್ಲಾ, ವಿಲ್ಫ್ರೇಡ್, ಸಂತೋಷ್ ಮೂಡುಬೆಳ್ಳೆ, ರವೀಂದ್ರ ಬೈಲೂರು, ಶಶೀಂಧ್ರ ಕುಮಾರ್, ದಿನೇಶ್ ಶೆಟ್ಟಿ, ಗಂಗಾಧರ್ ಎಚ್.ಎಂ, ಆನಂದ್ ಮಡಿವಾಳ, ಎನ್. ಆಚಾರ್ಯ, ಅಮೃತಕಲಾ ಉಪಸ್ಥಿತರಿದ್ದರು.
ಶತಮಾನೋತ್ತರ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಆರ್.ರಾಮಚಂದ್ರ ಅಡಿಗ ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.
‘ಜಾಮೀನು ನೀಡಲು ಧೈರ್ಯ ಮಾಡಿ’
ಜಿಲ್ಲಾ ನ್ಯಾಯಾಲಯಗಳು ಸಣ್ಣ ಪುಟ್ಟ ಪ್ರಕರಣಗಳಲ್ಲಿ ಆರೋಪಿಗಳ ಜಾಮೀನು ಅರ್ಜಿಗಳನ್ನು ತಿರಸ್ಕರಿಸದೇ, ಜಾಮೀನು ಮಂಜೂರುಗೊಳಿಸುವ ಧೈರ್ಯವನ್ನು ಮಾಡಬೇಕು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇ ಗೌಡ ಹೇಳಿದ್ದಾರೆ.
ದೇಶದಲ್ಲಿ ಸೈಬರ್ ಕ್ರೈಮ್, ಡ್ರಗ್ಸ್ ಪ್ರಕರಣ, ಪೋಕ್ಸೋ ಕೊಲೆಗಳಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ನಮ್ಮ ಜೈಲುಗಳು ತುಂಬಿ ತುಳುಕುತ್ತಿವೆ. ದೊಡ್ಡ ಪ್ರಕರಣಗಳ ಆರೋಪಿಗಳನ್ನೇ ಜೈಲಿನಲ್ಲಿಡಲು ಜಾಗ ಇಲ್ಲವಾಗಿದೆ. ಅದರಲ್ಲಿ ಸಣ್ಣಪುಟ್ಟ ಪ್ರಕರಣಗಳ ಆರೋಪಿಗಳನ್ನು ಎಲ್ಲಿ ಇರಿಸುವುದು. ಹಾಗಾಗಿ ಸಣ್ಣಪುಟ್ಟ ಪ್ರಕರಣಗಳ ಆರೋಪಿಗಳಿಗೆ ಸಾಮಾ ಜಿಕ ಕಳಕಳಿ ಯೊಂದಿಗೆ ಜಾಮೀನು ಕೊಡುವಾಗ ಕಾರ್ಯ ಆಗಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳುತ್ತಿದೆ ಎಂದರು.