ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣ: ಸತ್ಯಾಸತ್ಯತೆ ಬಗ್ಗೆ ಸಮಗ್ರ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಉಡುಪಿ: ಹೆಬ್ರಿ ತಾಲೂಕಿನ ಕಬ್ಬಿನಾಲೆ ಸಮೀಪದ ಪೀತಬೈಲು ಎಂಬಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡನ ಮೇಲೆ ಎಎನ್‌ಎಫ್ ನಡೆಸಿರುವ ಎನ್‌ಕೌಂಟರ್ ಪ್ರಕರಣದ ಬಗ್ಗೆ ರಾಜ್ಯ ಸರಕಾರ ಉನ್ನತ ಮಟ್ಟದ ತನಿಖೆ ನಡೆಸುವಂತೆ ಹಲವು ಜನಪರ ಹೋರಾಟಗಾರರು ಆಗ್ರಹಿಸಿದ್ದಾರೆ.
‘ಮನುಕುಲಕ್ಕೆ ಬದುಕಿನ ಅರ್ಥವನ್ನು ಬೋಧಿಸುವ, ಹೋರಾಟದ ಸ್ಪೂರ್ತಿಗೆ ಸೆಲೆಯಾಗಿರುವ ನಕ್ಸಲ್ ಹೋರಾಟ ಗಾರರನ್ನು ಬಂಧಿಸುವ ಪ್ರಯತ್ನ ಮಾಡದೆ ನಿರ್ದಯವಾಗಿ ಎನ್‌ಕೌಂಟರ್ ನಡೆಸಿರುವುದು ಖಂಡನೀಯ. ಸ್ವಾರ್ಥ ಏನು ಎಂಬುದನ್ನೇ ಅರಿಯದೆ ಸತತವಾಗಿ ಜನತೆಯ ಬದಲಾವಣೆಗಾಗಿ ದುಡಿಯವ ನಕ್ಸಲೈಟರೆಂದರೆ ಗೂಂಡಾಗಿರಿ ನಡೆಸುವ ಹಿಂಸಾವಾದಿಗಳೆಂದು ಬಿಂಬಿಸು ವುದು ಸರಿಯಲ್ಲ’ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ತಿಳಿಸಿದ್ದಾರೆ.
ಸಶಸ್ತ್ರ ಹೋರಾಟವು ಸಮಾಜದಲ್ಲಿ ಯಾರನ್ನು ಗುರಿ ಮಾಡಲು ಹೊರಟಿದೆ ಎಂಬುದು ನಿರ್ಣಾಯಕ ವಿಷಯವಾಗಿದೆ. ಅದು ಭೂಮಾಲೀಕರ, ದಲ್ಲಾಳಿ ಬಂಡವಾಳಿಗರ ಮತ್ತು ಅವರ ಸೇವೆ ಮಾಡುವ ಸಾಮ್ರಾಜ್ಯಶಾಹಿಗೆ ಗುರಿ ಮಾಡುವುದಾದರೆ ಅದು ಪ್ರಗತಿಪರ ಮತ್ತು ಪ್ರಜಾತಾಂತ್ರಿಕವಾಗುತ್ತದೆ. ಪ್ರಭುತ್ವಗಳು ಚರಿತ್ರೆಯುದ್ದಕ್ಕೂ ಮಾಡುತ್ತ ಬಂದ ತಪ್ಪನ್ನೇ ನಮ್ಮ ಸಿದ್ಧರಾಮಯ್ಯ ಸರಕಾರ ಮಾಡದೆ ಜನರ ಮುಂದೆ ಸತ್ಯವನ್ನು ಬಿಚ್ಚಿಡುವ ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಹೆಬ್ರಿಯ ಈ ಎನ್‌ಕೌಂಟರ್ ಘಟನೆಯನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಂಶಯಗಳ ಹುತ್ತ: ನಕ್ಸಲ್ ವಿಕ್ರಮ್ ಗೌಡ ನಕ್ಸಲ್ ನಿಗ್ರಹ ದಳದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಘಟನೆ ಸಂಶಯವನ್ನು ಹುಟ್ಟು ಹಾಕಿದ್ದು, ರಾಜ್ಯ ಸರಕಾರ ತಕ್ಷಣ ಈ ಎನ್‌ಕೌಂಟರ್‌ನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಹೋರಾಟಗಾರ ಶೇಖರ್ ಲಾಯಿಲ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ 21 ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ಈದುವಿನಲ್ಲಿ ನಡೆದ ಎನ್ ಕೌಂಟರ್ ಬಳಿಕ ಹತ್ತಾರು ನಕ್ಸಲ್ ಎನ್‌ಕೌಂಟರ್ ಗಳು ನಡೆದಿವೆ. ಯಾವುದೇ ಎನ್ ಕೌಂಟರ್ ನಡೆಸುವ ಮೊದಲು ಯಾವುದೇ ಮನೆಯನ್ನು ತೆರವು ಮಾಡಿದ ಇತಿಹಾಸವಿಲ್ಲ. ಆದರೆ ವಿಕ್ರಮ್ ಗೌಡ ಎನ್ ಕೌಂಟರ್‌ನಲ್ಲಿ ಮಾತ್ರ ಎನ್‌ಕೌಂಟರ್ ಮೊದಲು ಸ್ಥಳೀಯ ಮನೆಯವರನ್ನು ತೆರವು ಮಾಡಿದ ಎರಡು ದಿನಗಳ ನಂತರ ಎನ್ ಕೌಂಟರ್ ನಡೆಸಿದ ಘಟನೆ ಸಂಶಯಕ್ಕೆ ಕಾರಣ ವಾಗಿದೆ.
ಎನ್‌ಕೌಂಟರ್ ನಡೆದ ಸ್ಥಳಕ್ಕೆ ಪತ್ರಿಕೆ, ಟಿವಿ ಮಾದ್ಯಮದವರನ್ನು ಪ್ರವೇಶ ನೀಡದೆ, ಶವವನ್ನು ನೋಡಲು ಬಿಡದೆ ನಕ್ಸಲ್ ನಿಗ್ರಹ ದಳ ಅಸಂವಿಧಾನಿಕ ವಾಗಿ ನಡೆದುಕೊಂಡಿದೆ. ಮನೆಯೊಂದರಲ್ಲಿ ಎನ್ ಕೌಂಟರ್ ನಡೆದಿದೆ ಎನ್ನುವ ಪೋಲಿಸ್ ಇಲಾಖೆಯ ಹೇಳಿಕೆ ಇನ್ನೊಂದು ರೀತಿಯಲ್ಲಿ ಸಂಶಯಕ್ಕೆ ಕಾರಣ ವಾಗಿದೆ. ನಕ್ಸಲರು ನಡೆಸಿದ ಪ್ರತಿದಾಳಿಯಲ್ಲಿ ಪೊಲೀಸ ರಿಗೆ ಗಾಯವಾಗಿಲ್ಲ. ನಕ್ಸಲರ ಪ್ರತಿದಾಳಿಯ ಗುಂಡು ಯಾವುದಕ್ಕೆ ತಗುಲಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಎನ್‌ಕೌಂಟರ್ ನಡೆಯುವ ಮೊದಲು ಕೇಂದ್ರ ಸಶಸ್ತ್ರ ಪಡೆಗಳನ್ನು ಕರೆಸಿಕೊಂಡಿದ್ದು ಏಕೆ? ರಾಜ್ಯದ ನಕ್ಸಲ್ ನಿಗ್ರಹ ದಳ ಅಷ್ಟು ಕೆಟ್ಟು ಹೋಗಿದೆಯೇ? ಎನ್ ಕೌಂಟರ್ ನಡೆಸಿದ್ದು ನಕ್ಸಲ್ ನಿಗ್ರಹ ದಳವೋ ಅಥವಾ ಕೇಂದ್ರ ಸಶಸ್ತ್ರ ಪಡೆಯೋ ಎಂಬ ಅನು ಮಾನದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಶೇಖರ್ ಲಾಯಿಲ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಅಪ್ಪಟ್ಟ ಪ್ರಜಾತಂತ್ರ ವಿರೋಧಿ ಧೋರಣೆ: ನೀಲಗುಳಿ ಪದ್ಮನಾಭ
ವಿಕ್ರಂ ಗೌಡ ಇತ್ತೀಚೆಗೆ ಇವರು ಯಾವುದೇ ಕಾನೂನು ಬಾಹಿರ ಚಟುವಟಿಕೆ ಮಾಡಿಲ್ಲ. ಹಿಂಸಾ ಕೃತ್ಯದಲ್ಲಿ ತೊಡಗಿರಲಿಲ್ಲ. ಕರಪತ್ರ ಹಂಚಿಲ್ಲ ಮತ್ತು ಬ್ಯಾನರ್ ಕಟ್ಟಿಲ್ಲ. ಹಾಗಿರುವಾಗ ಪೊಲೀಸರು ತರಾತುರಿಯಲ್ಲಿ ಎಸಗಿರುವ ಈ ಕೃತ್ಯ ಆತಂಕ ಮತ್ತು ಪ್ರಶ್ನೆಯನ್ನು ಮೂಡಿಸುತ್ತದೆ ಎಂದು ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭ ತಿಳಿಸಿದ್ದಾರೆ.
ನಕ್ಸಲರನ್ನು ಮುಖ್ಯವಾಹಿನಿಗೆ ಕರೆ ತರಲು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳನ್ನು ಮಾಡಲಾಗಿದೆ. ಈ ಮೂಲಕ ವಿಕ್ರಂ ಗೌಡ ಅವರನ್ನು ಮುಖ್ಯವಾಹಿನಿಗೆ ಕರೆ ತರಲು ಪ್ರಯತ್ನಗಳು ನಡೆಯುತ್ತಿತ್ತು. ಈ ಮಧ್ಯೆ ಅವರನ್ನು ಹತ್ಯೆ ಮಾಡಲಾ ಗಿದೆ. ಇವರೆಲ್ಲ ಪ್ರಜಾತಾಂತ್ರಿಕ ಬೇಡಿಕೆಗಳನ್ನು ಇಟ್ಟುಕೊಂಡೇ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಆದುದರಿಂದ ಅವರ ಮುಂದಿಟ್ಟ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಲು ಸರಕಾರ ಗಮನ ಕೊಡಬೇಕೆ ಹೊರತು ಅವರನ್ನೇ ಹತ್ತಿಕ್ಕುವುದು ಅಪ್ಪಟ್ಟ ಪ್ರಜಾತಂತ್ರ ವಿರೋಧಿ ಮತ್ತು ಅಧಿಕಾರಿಶಾಹಿ ಧೋರಣೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.
ಆದುದರಿಂದ ಈ ಎನ್‌ಕೌಂಟರ್ ಕೃತ್ಯದ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡ ಬೇಕು. ಅದಕ್ಕಾಗಿ ನಾಗರಿಕರು, ಹೋರಾಟಗಾರರು, ವಕೀಲರು, ಪತ್ರಕರ್ತರ ಒಳಗೊಂಡ ಸಮಿತಿ ರಚಿಸಿ ಸಮಗ್ರ ತನಿಖೆ ನಡೆಸಬೇಕು. ಆ ಮೂಲಕ ಸತ್ಯಾಸತ್ಯ ಹೊರತಂದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ನಕ್ಸಲ್ ನೀಲಗುಳಿ ಪದ್ಮನಾಭ ಆಗ್ರಹಿಸಿದ್ದಾರೆ.