ಕೇಂದ್ರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಲಿ: ಸಂಸದ ಕೋಟ
ಉಡುಪಿ, ನ.21: ಕೇಂದ್ರ ಸರಕಾರದ ಪ್ರತಿಯೊಂದು ಯೋಜನೆಯು ಜನಸಾಮಾನ್ಯರಿಗೆ ತಲುಪಬೇಕಾದ್ದರಿಂದ ಅಧಿಕಾರಿ ಗಳು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಮುಂದಿನ ತಿಂಗಳು ನಡೆಯುವ ಸಂಸದರ ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆಯ ಪೂರ್ವ ಸಿದ್ಧತೆ ಕುರಿತು ಚರ್ಚಿಸಲು ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಟ, ಗಣಿ ಇಲಾಖೆಯ ಮೂಲಕ ಜಿಲ್ಲೆಯಲ್ಲಿ ಸಂಗ್ರಹವಾದ ಹಣವನ್ನು ಯಾವ ಪ್ರದೇಶಗಳಿಂದ ಗಣಿಗಾರಿಕೆ ನಡೆಯುತ್ತೋ ಅದೇ ಪಂಚಾಯತ್ ವ್ಯಾಪ್ತಿಯ ರಸ್ತೆ ನಿರ್ಮಾಣಕ್ಕೆ ಪ್ರಾಧಾನ್ಯತೆ ನೀಡ ಬೇಕಾಗಿದೆ ಎಂಬ ಸೂತ್ರದಡಿ ವೆಚ್ಚ ಮಾಡಬೇಕಾಗಿದೆ ಮತ್ತು ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ (ಪಿಎಂಕೆಕೆಕೆವೈ) ಯೋಜನೆಯ ಕಾರ್ಯಕ್ರಮದಡಿ ಹಣಕಾಸು ಹಂಚಿಕೆ ಪಾರದರ್ಶಕವಾಗಿರಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಯೋಜನೆಯಂತೆ, ಬೈಂದೂರು ಕ್ಷೇತ್ರದ 788 ವಸತಿ ಪ್ರದೇಶಗಳು ಹಾಗೂ ಬೈಂದೂರು ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜಿನ ಪ್ರಗತಿ ಮತ್ತು ಕುಂದಾಪುರ ತಾಲೂಕಿನ, ಹಾಲಾಡಿ ಬಳಿಯ ವಾರಾಹಿ ನದಿಯಿಂದ ಉಡುಪಿ, ಕಾರ್ಕಳ, ಹೆಬ್ರಿ, ಕಾಪುವಿನ 69 ಗ್ರಾಮಗಳಿಗೆ ಬೃಹತ್ ನೀರು ಸರಬರಾಜಿನ ಬಗ್ಗೆ ಅಧಿಕಾರಿಗಳು ಪ್ರಗತಿಯ ಮಾಹಿತಿ ಒದಗಿಸಿದರು.
ಜಲಜೀವನ್ ಮಿಷನ್ ಯೋಜನೆಯೂ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸಬೇಕೆಂದು ಸಂಸದರು ಸೂಚಿಸಿದರು. ಮೀನುಗಾರಿಕೆ ಇಲಾಖೆಯ ಮೂಲಕ ಮತ್ಸ್ಯ ಸಂಪದ ಯೋಜನೆಯ ಅನುಷ್ಠಾನಕ್ಕೆ ಪಂಜರದ ಕೃಷಿಗಾಗಿ ರಾಜ್ಯ ಸರ್ಕಾರದ ಮೂಲಕ ಪ್ರಸ್ತಾಪವೊಂದನ್ನು ಸಲ್ಲಿಸಲು ನಿರ್ಣಯಿಸಲಾುತು.
1200 ಮಂದಿಗೆ ವಿಶ್ವಕರ್ಮ ಯೋಜನೆ ಮಂಜೂರು: ಕೈಗಾರಿಕಾ ಇಲಾಖೆ ಮತ್ತು ಕೌಶಲಾಭಿವೃದ್ಧಿ ಇಲಾಖೆಯ ಮೂಲಕ ಲೀಡ್ ಬ್ಯಾಂಕ್ ವತಿಯಿಂದ 1200 ಫಲಾನುಭವಿಗಳಿಗೆ ವಿಶ್ವಕರ್ಮ ಯೋಜನೆ ಮಂಜೂರು ಮಾಡಿದ್ದು, ಮುದ್ರಾ ಸಾಲವೂ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಬಿಡುಗಡೆಯಾದ ಸಾಲ ಸೌಲಭ್ಯದ ಬಗ್ಗೆ ಲೀಡ್ ಬ್ಯಾಂಕ್‌ನ ಪ್ರಬಂಧಕರು ವರದಿ ಸಲ್ಲಿಸಿದರು.
ಪಡಿತರ ಚೀಟಿಯ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಗೆ ಬಡವರ ಯಾವುದೇ ಪಡಿತರ ಚೀಟಿ ರದ್ದಾ ಗಂತೆ ಎಚ್ಚರಿಕೆ ವಹಿಸಬೇಕೆಂದ ಕೋಟ, ಬಡವರು ಮನೆ ಕಟ್ಟಲು ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಸಾಲ ತೆಗೆಯಲು ಆದಾಯ ಇಲಾಖೆಗೆ ಮಾಡಿದ ಪಾವತಿಯನ್ನು ಮುಂದಿಟ್ಟುಕೊಂಡು ಪಡಿತರ ಚೀಟಿ ರದ್ದು ಮಾಡಬಾರದೆಂದು ಸಲಹೆ ಇತ್ತರು.
ರಾಷ್ಟ್ರೀಯ ಹೆದ್ದಾರಿ 169ರ ಬಗ್ಗೆ ಮಾಹಿತಿ ಒದಗಿಸಿದ ಅಧಿಕಾರಿ ಮಂಜುನಾಥ ನಾಯಕ್, ಮಲ್ಪೆ ಪ್ರದೇಶದ ಭೂಸ್ವಾಧೀನಕ್ಕೆ ಹಣ ಪಾವತಿಯ ಅನುಮೋದನೆಗೆ ಬೆಂಗಳೂರು ಪ್ರಾದೇಶಿಕ ಕಚೇರಿಗೆ ಪ್ರಸ್ತಾಪನೆ ಹೋಗಿದ್ದು, ಇಂದ್ರಾಳಿಯ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಸಂಸದ ಕೋಟ, ಇಂದ್ರಾಳಿ ಮೇಲ್ಸೆತುವೆ ಕಾಮಗಾರಿ ಜನವರಿ ಮಧ್ಯದಲ್ಲಿ ಪೂರ್ಣಗೊಳಿಸುವುದಾಗಿ ಲಿಖಿತ ಹೇಳಿಕೆ ಕೊಟ್ಟಿದ್ದೀರಿ. ಕಾಮಗಾರಿ ಆರಂಭವಾದ ನಂತರ ನಡೆಯುತ್ತಿರುವ ಚಳುವಳಿಯನ್ನು ಗಮನದಲ್ಲಿಟ್ಟುಕೊಂಡು ನಿಗದಿತ ಸಮಯಕ್ಕೆ ಕೆಲಸ ಮುಗಿಸಬೇಕೆಂದು ತಾಕೀತು ಮಾಡಿದರು.
ಸುದೀರ್ಘವಾಗಿ ನಡೆದ ದಿಶಾ ಪೂರ್ವಭಾವಿ ಸಭೆಯಲ್ಲಿ ಸಂಸದ ಕೋಟ ಅವರೊಂದಿಗೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ನಾಗರಾಜ ನಾಯಕ್, ಜಿಲ್ಲಾ ಕೌಶಾಲಾಭಿವೃದ್ಧಿ ಅಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.