ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣ: ಪೀತಬೈಲು ಅರಣ್ಯದಲ್ಲಿ ಎಎನ್‌ಎಫ್ ವಿಶೇಷ ಕೂಂಬಿಂಗ್ ಕಾರ್ಯಾಚರಣೆ
ಹೆಬ್ರಿ: ನಕ್ಸಲ್ ನಾಯಕ ವಿಕ್ರಂ ಗೌಡ ಅವರ ಎನ್‌ಕೌಂಟರ್ ನಡೆದ ಕಬ್ಬಿನಾಲೆ ಸಮೀಪದ ಪೀತಬೈಲು ದಟ್ಟ ಅರಣ್ಯದಲ್ಲಿ ಗುರುವಾರ ನಕ್ಸಲ್ ನಿಗ್ರಹ ಪಡೆಯು ವಿಶೇಷ ಕೂಂಬಿಂಗ್ ಕಾರ್ಯಾಚರಣೆಯನ್ನು ನಡೆಸಿದೆ. ಈ ಮೂಲಕ ಈ ಪರಿಸರ ದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಎನ್‌ಕೌಂಟರ್ ನಡೆದ ಸಂದರ್ಭ ವಿಕ್ರಂ ಗೌಡ ಜೊತೆಗಿದ್ದ ಇತರರು ಗುಂಡು ಹಾರಿಸಿಕೊಂಡು ಕಾಡಿನಲ್ಲಿ ಪರಾರಿಯಾಗಿರು ವುದಾಗಿ ಪೊಲೀಸರು ತಿಳಿಸಿದ್ದು, ಆ ಹಿನ್ನೆಲೆಯಲ್ಲಿ ಅವರ ಹುಡುಕಾಟಕ್ಕಾಗಿ ಇಂದು ದಿನ ಪೂರ್ತಿ ವಿಶೇಷ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದೆ ಎನ್ನಲಾಗಿದೆ.
ಎಎನ್‌ಎಫ್ ಎಸ್ಪಿ ಜೀತೆಂದ್ರ ದಯಾಮ ನೇತೃತ್ವದಲ್ಲಿ ಪೀತಬೈಲು, ತಿಂಗಳಮಕ್ಕಿ, ಮತ್ತಾವು ಹಾಗೂ ಕಬ್ಬಿನಾಲೆ ಅರಣ್ಯಗಳಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ನಾಳೆಯು ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ. ಇಂದು ಪರಾರಿಯಾಗಿದ್ದಾರೆನ್ನಲಾದ ಇತರರ ಸುಳಿವಿಗಾಗಿ ಸ್ಥಳಕ್ಕೆ ಶ್ವಾನದಳವನ್ನು ಕರೆಸಿ ತನಿಖೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಎನ್‌ಕೌಂಟರ್ ಪ್ರಕರಣದ ತನಿಖೆ
ಕಬ್ಬಿನಾಲೆ ಸಮೀಪದ ಪೀತಬೈಲು ಎಂಬಲ್ಲಿ ಸೋಮವಾರ ಸಂಜೆ ನಡೆದ ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್‌ಗೆ ಸಂಬಂಧಿಸಿ ಈಗಾಗಲೇ ಹೆಬ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಆರಂಭಗೊಂಡಿದೆ.
ಕಾರ್ಕಳ ಮತ್ತು ಹೆಬ್ರಿ ವಲಯದ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಸದಸ್ಯರ ಚಲನವಲನ ಕಂಡು ಬರುತ್ತಿದ್ದು, ಈ ಬಗ್ಗೆ ಎಎನ್‌ಎಫ್ ಅಧಿಕಾರಿ ಮತ್ತು ಸಿಬ್ಬಂದಿ ವಾರದಿಂದ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಕೂಬಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದರು. ನ.18 ರಂದು ಕೂಬಿಂಗ್ ಮಾಡುತ್ತಿರುವಾಗ ಪೀತಬೈಲಿನ ಅರಣ್ಯದಲ್ಲಿ ವಿಕ್ರಂ ಗೌಡ ಹಾಗೂ ಇತರರೆಂದು ಬರುತ್ತಿರುವುದು ಕಂಡುಬಂತು. ಆಗ ಅವರಿಗೆ ಶರಣಾಗುವಂತೆ ತಿಳಿಸಿ ದರೂ ಅದನ್ನು ದಿಕ್ಕರಿಸಿ ಎಎನ್‌ಎಫ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕೊಲ್ಲುವ ಉದ್ದೇಶದಿಂದ ಗುಂಡು ಹಾರಿಸಿದರು. ಆಗ ಆತ್ಮ ರಕ್ಷಣೆಗಾಗಿ ಪ್ರತಿದಾಳಿ ನಡೆಸಿದಾಗ ವಿಕ್ರಮ ಗೌಡ ಮೃತಪಟ್ಟಿದ್ದಾರೆ ಎಂದು ಎಎನ್‌ಎಫ್ ಅಧಿಕಾರಿಗಳು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ನಕ್ಸಲರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿರುವ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ನೇತೃತ್ವದಲ್ಲಿ ಈ ಕುರಿತು ತನಿಖೆ ನಡೆಯುತ್ತಿದೆ. ಈ ಸಂಬಂಧ ತನಿಖಾಧಿಕಾರಿ ಗಳು ಎಎನ್‌ಎಫ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ವಿಚಾರಣೆ ನಡೆಸಲಿದ್ದಾರೆ. ಅಲ್ಲದೆ ವಿವಿಧ ಆಯಾಮ ಗಳಲ್ಲಿಯೂ ತನಿಖೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಮನೆ ಪೊಲೀಸ್ ವಶದಲ್ಲಿ
ತನಿಖೆಯ ಉದ್ದೇಶದಿಂದ ಎನ್‌ಕೌಂಟರ್ ನಡೆದ ಜಯಂತ್ ಗೌಡ ಅವರ ಮನೆಯು ಈಗಾಗಲೇ ಪೊಲೀಸರು ವಶಪಡಿಸಿ ಕೊಂಡಿದ್ದು, ಈ ಪ್ರದೇಶಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇದೀಗ ತನಿಖೆಯನ್ನು ಪೂರ್ಣಗೊಳಿಸಿರುವುದರಿಂದ ಮನೆಯನ್ನು ಬಿಟ್ಟು ಕೊಡಲಾಗಿದೆ ಎಂದು ತಿಳಿದುಬಂದಿದೆ. ಆದರೆ ಜಯಂತ್ ಗೌಡ ಮನೆ ಯವರು ಇನ್ನು ಕೂಡ ಅಲ್ಲೇ ಸಮೀಪದಲ್ಲಿ ಇರುವ ಅವರ ಸಂಬಂಧಿಕರಾದ ಸುಧಾಕರ್ ಗೌಡ ಅವರ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನ್ಯಾಯಾಧೀಶರಿಂದ ಸ್ಥಳ ಪರಿಶೀಲನೆ
ಕಾರ್ಕಳ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಕೋಮಲ್ ಇಂದು ಬೆಳಗ್ಗೆ ಎನ್‌ಕೌಂಟರ್ ನಡೆದ ಪೀತಬೈಲುವಿನ ಜಯಂತ್ ಗೌಡ ಅವರ ಮನೆಗೆ ಭೇಟಿ ನೀಡಿದರು. ಬಳಿಕ ಅವರು ಘಟನಾ ಸ್ಥಳವನ್ನು ಪರಿಶೀಲಿಸಿ ಮಹಜರು ನಡೆಸಿದರು. ಈ ವೇಳೆ ಎಎನ್‌ಎಫ್ ಅಧಿಕಾರಿಗಳು ಹಾಜರಿದ್ದರು. ಅಲ್ಲದೆ ಬೀಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು.