ತುರ್ತು ಸಂದರ್ಭಗಳಲ್ಲಿ ಬೆಡ್ ನೀಡಲು ಹಿಂದೆ ಮುಂದೆ ನೋಡಬೇಡಿ: ಆಸ್ಪತ್ರೆಗಳಿಗೆ ಸಂಸದ ಕೋಟ ಸೂಚನೆ

Update: 2024-11-21 16:11 GMT

ಮಣಿಪಾಲ: ನ್ಯೂರೋ ಮತ್ತು ಎನ್‌ಐಸಿಯು ಬೆಡ್‌ಗಳ ಕೊರತೆ ನೀಗಿಸಲು ನಗರದ ಹೈಟೆಕ್ ಮತ್ತು ಆದರ್ಶ ಆಸ್ಪತ್ರೆ ಗಳಿಗೆ ಆಯುಷ್ಮಾನ್ ಯೋಜನೆಯಡಿ ವ್ಯವಸ್ಥೆ ಕಲ್ಪಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ಗಳನ್ನು ನೀಡಿದ್ದಾರೆ.

ಮಣಿಪಾಲ ಜಿಪಂನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಆಯುಷ್ಮಾನ್ ಭಾರತ್ ಯೋಜನೆಯ ಕುಂದು ಕೊರತೆಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಡವರ ಆರೋಗ್ಯ ಸಮಸ್ಯೆಗಳಿಗೆ ತುರ್ತು ಪರಿಹಾರ ನೀಡ ಬೇಕು ಎನ್ನುವ ದೃಷ್ಠಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಿದ್ದಾರೆ. ಈ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಆಸ್ಪತ್ರೆಗಳು ಕೈ ಜೋಡಿಸಬೇಕು ಎಂದರು.

ಉಡುಪಿ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಸಂಬಂಧ ಪಟ್ಟಂತೆ ನ್ಯೂರೋ ಮತ್ತು ಎನ್‌ಐಸಿಯು ಬೆಡ್‌ ಗಳಿಗಾಗಿ ಕೆಎಂಸಿ ಮಣಿಪಾಲ ವನ್ನು ಮಾತ್ರ ಆಶ್ರಯಿಸಬೇಕಿದೆ. ಇದರಿಂದ ಅಲ್ಲಿ ಕೂಡ ಒತ್ತಡ ಆಗುತ್ತಿದ್ದು, ಉಡುಪಿ ಜಿಲ್ಲೆಯ ಹಲವಾರು ಕೇಸ್‌ಗಳನ್ನು ಮಂಗಳೂರಿನ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಆದರ್ಶ ಮತ್ತು ಹೈಟೆಕ್ ಆಸ್ಪತ್ರೆಗಳಲ್ಲಿ ಕೂಡ ಕೂಡಲೇ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಬೇಕು ಎಂದು ಅವರು ಸೂಚಿಸಿದರು.

ಇದಕ್ಕೆ ಉತ್ತರಿಸಿದ ಡಿಎಚ್‌ಓ ಡಾ. ಈಶ್ವರಪ್ಪ ಗಡಾದ ಕೆಲವೊಂದು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಅದು ಈಗ ಪೂರ್ಣಗೊಂಡಿದ್ದು, ಅನುಮತಿಗಾಗಿ ಕಾಯಲಾಗುತ್ತಿದೆ ಎಂದರು.

ಅನುಮತಿ ನೀಡದೇ ಇದ್ದರೂ ಅಲ್ಲಿಗೆ ಕಳುಹಿಸಿದರೆ ಬಿಲ್ ಪಾವತಿ ವೇಳೆ ಸಮಸ್ಯೆಯಾಗುತ್ತದಾ? ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು. ಅನುಮತಿಗೆ ಹೋಗಿರುವುದರಿಂದ ಬಿಲ್‌ಗೆ ಸಮಸ್ಯೆಯಾಗುವುದಿಲ್ಲ. ಕೂಡಲೇ ನಾವು ಅಲ್ಲಿಗೆ ರೆಫರ್ ಮಾಡಬಹುದು ಎಂದು ಡಿಎಚ್‌ಓ ಉತ್ತರಿಸಿದರು.

ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳ ಜನರು ಉನ್ನತ ಚಿಕಿತ್ಸೆಗಾಗಿ ಕೆಎಂಸಿಯನ್ನೇ ಆಶ್ರಯಿಸಬೇಕಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಉಡುಪಿ ಜಿಲ್ಲೆಯ ಜನರಿಗೆ ಬೆಡ್‌ಗಳು ಸಿಗುತ್ತಿಲ್ಲ. ಹೀಗಾಗಿ ಉಡುಪಿ ಜಿಲ್ಲೆಯವರಿಗೆ ಬೆಡ್ ಕಾದಿರಿಸಬೇಕು ಎಂದು ಆರೋಗ್ಯ ಮಿತ್ರ ಕಾರ್ಯಕರ್ತರು ಸಭೆಯಲ್ಲಿ ಆಗ್ರಹ ಮಾಡಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆರೋಗ್ಯ ಸೇವೆ ಎನ್ನುವುದು ಎಲ್ಲರಿಗೂ ಅಗತ್ಯವಿರುವುದು, ಹಾಗೆಂದು ಜಿಲ್ಲೆಯವರಿಗೆ ಬೆಡ್ ಮೀಸಲಿಡುವುದು ಸರಿಯಾದ ನಿರ್ಧಾರವಲ್ಲ ಎಂದರು. ಸಂಸದರು ಮಾತನಾಡಿ ಬೆಡ್ ಕಾದಿರಿಸುವುದು ಸಾಧ್ಯವಿಲ್ಲ. ಆದರೆ ಗುಣಮುಖ ರಾಗುತ್ತಿದ್ದಾರೆ ಡಿಸ್ಚಾರ್ಜ್ ಮಾಡಿದರೂ ತೊಂದರೆ ಇಲ್ಲ ಎಂದು ಕಂಡು ಬಂದ ರೋಗಿಗಳನ್ನು ಶೀಘ್ರ ಡಿಶ್ಚಾರ್ಜ್ ಮಾಡಿ, ಅವರ ಬದಲಿಗೆ ತುರ್ತಾಗಿ ಅಗತ್ಯವಿರುವ ರೋಗಿಗಳಿಗೆ ಆ ಬೆಡ್ ನಿಗದಿಪಡಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಈ ಮಧ್ಯೆ ಕೆಎಂಸಿಯ ಬೆಡ್ ಸಮಸ್ಯೆ ಬಗ್ಗೆ ಸಾಕಷ್ಟು ಚರ್ಚೆ ನಡೆದವು. ಕೆಎಂಸಿಯಲ್ಲಿ ಬೇರೆ ವಿಭಾಗಗಳಲ್ಲಿ ಬೆಡ್ ಖಾಲಿ ಇದ್ದರೂ ಸ್ವಲ್ಪವೂ ಕೂಡ ಹೊಂದಾಣಿಕೆ ಮಾಡಿಕೊಳ್ಳದೇ ಬೆಡ್ ಇಲ್ಲ ಎನ್ನುತ್ತಿದ್ದಾರೆ. ನ್ಯೂರೋದಲ್ಲಿ ಬೆಡ್‌ಗಳು ಖಾಲಿ ಇಲ್ಲದೆ ಇದ್ದರೆ ಕಿಡ್ನಿ ವಿಭಾಗದಲ್ಲಿ ಖಾಲಿ ಇರುತ್ತದೆ. ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಸಂಸದರು ಮತ್ತು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಇದಕ್ಕೆ ಕೆಎಂಸಿ ಆಸ್ಪತ್ರೆಯ ಪ್ರತಿನಿಧಿಗಳು ಮಾತನಾಡಿ ಕೆಲವೊಂದು ತಾಂತ್ರಿಕ ಕಾರಣಗಳನ್ನು ನೀಡಿ ಹಾಗೆ ಬೆಡ್‌ಗಳನ್ನು ನೀಡಲು ಸಾಧ್ಯವಿಲ್ಲ. ಆದರೂ ಅಗತ್ಯವಿದ್ದಾಗ ಬೆಡ್ ವ್ಯವಸ್ಥೆ ಮಾಡಿದ್ದೇವೆ ಎಂದರು. ಜಿಲ್ಲಾಧಿಕಾರಿ ಉತ್ತರಿಸಿ ಅಗತ್ಯ ಬರುವುದು ಒಂದೋ ಅಥವಾ ಎರಡು ಬೆಡ್‌ಗಳು. ಅದನ್ನು ತುರ್ತು ಸಂದರ್ಭದಲ್ಲಿ ನೀಡಿ ಎಂದರು.

ಹರೀಶ್ ಸಾಂತ್ವಾನ ಯೋಜನೆ: ಅಪಘಾತಗಳಿಗೆ ಸಂಬಂಧಿಸಿದ ಹರೀಶ್ ಸಾಂತ್ವಾನ ಯೋಜನೆಗೆ ಆಯುಷ್ಮಾನ್ ಭಾರತ ದಡಿ ಉಡುಪಿ ಜಿಲ್ಲೆಯ ಯಾವುದೇ ಆಸ್ಪತ್ರೆಗಳು ನೋಂದಣಿ ಮಾಡಿಕೊಂಡಿಲ್ಲ ಎಂದು ಆಯುಷ್ಮಾನ್ ಭಾರತ್ ಯೋಜ ನೆಯ ನೋಡಲ್ ಅಧಿಕಾರಿ ಡಾ. ಲತಾ ಸಭೆಯ ಗಮನಕ್ಕೆ ತಂದರು. ಈ ಸಮಸ್ಯೆಗೆ ಕಾರಣವೇನು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಳಿದರು.

ಇದಕ್ಕೆ ಉತ್ತರಿಸಿದ ಡಾ.ಲತಾ, ಹರೀಶ್ ಸಾಂತ್ವಾನ ಯೋಜನೆಯಡಿ ಕೇವಲ 48 ಗಂಟೆಗಳವರೆಗೆ ಮಾತ್ರ ಚಿಕಿತ್ಸೆ ನೀಡಲು ಅವಕಾಶವಿದೆ. ಆ ಬಳಿಕ ಏನು ಎನ್ನುವುದೇ ಆಸ್ಪತ್ರೆಗಳ ಮುಂದಿರುವ ದೊಡ್ಡ ಸವಾಲು ಈ ಕಾರಣಕ್ಕಾಗಿ ಯಾರೂ ಕೂಡ ನೋಂದಣಿ ಮಾಡಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು. ಇದಕ್ಕೆ ಉತ್ತರಿಸಿದ ಸಂಸದರು ಆರೋಗ್ಯ ಇಲಾಖೆಯ ಆಯುಕ್ತರ ಜೊತೆ ಚರ್ಚೆ ನಡೆಸಿ ಈ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಶಾಸಕ ಯಶಪಾಲ್ ಸುವರ್ಣ, ವಿವಿಧ ಆಸ್ಪತ್ರೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News