ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಿ: ಹೆದ್ದಾರಿ ಪ್ರಾಧಿಕಾರಕ್ಕೆ ಉಡುಪಿ ಡಿಸಿ ಸೂಚನೆ

Update: 2024-11-27 14:24 GMT

ಉಡುಪಿ, ನ.27: ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ರಸ್ತೆಯ ನಿರ್ವಹಣೆಯನ್ನು ಸಮರ್ಪಕ ವಾಗಿ ನಿರ್ವಹಿಸಬೇಕು. ಕಾಲಕಾಲಕ್ಕೆ ಹೆದ್ದಾರಿಯನ್ನು ದುರಸ್ಥಿಗೊಳಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆಗಳನ್ನು ನೀಡಿದರು.

ಬುಧವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಕುರಿತು ಚರ್ಚಿಸಲು ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ರಾ.ಹೆದ್ದಾರಿ 66ರಲ್ಲಿ ಮಳೆ ಯಿಂದ ಉಂಟಾದ ಹೊಂಡ-ಗುಂಡಿಗಳನ್ನು ದುರಸ್ಥಿ ಮಾಡುವ ಬಗ್ಗೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳು ಶುಲ್ಕವನ್ನು ಕಟ್ಟಿ ಸಂಚರಿಸುತ್ತವೆ. ಈ ವಾಹನಗಳು ಸರಾಗವಾಗಿ ಸಂಚರಿಸಲು ಅನುಕೂಲ ವಾಗುವಂತೆ ಹೆದ್ದಾರಿಯ ನಿರ್ವಹಣೆ ಮಾಡಬೇಕು. ಕಳೆದ ಮುಂಗಾರು ಮಳೆ ಯಿಂದಾಗಿ ರಸ್ತೆ ಯಲ್ಲಿ ಅಲ್ಲಲ್ಲಿ ಹೊಂಡಗಳು ಬಿದ್ದಿರುವ ಬಗ್ಗೆ ಹಾಗೂ ರಸ್ತೆ ಬದಿಯ ಬೀದಿದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ಕುರಿತಂತೆ ದೂರುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿವೆ. ಪ್ರಾಧಿಕಾರದ ಅಧಿಕಾರಿಗಳು ಕೂಡಲೇ ಈ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಅವರು ತಿಳಿಸಿದರು.

ಸ್ಥಳೀಯ ಜನರು ರಸ್ತೆ ಕುಂದುಕೊರತೆ ಬಗ್ಗೆ ದೂರು ನೀಡಿದಾಗ ಅವುಗಳಿಗೆ ಸ್ಪಂದಿಸಿ, ಗುತ್ತಿಗೆದಾರರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ನಿರ್ವಹಣೆ ಕಾಮಗಾರಿಗಳನ್ನು ಆಗಿಂದಾಗ್ಗೆ ಸಮನ್ವಯದೊಂದಿಗೆ ಕೈಗೊಂಡು ಕಾರ್ಯ ನಿರ್ವಹಿಸಿದಾಗ ಜಿಲ್ಲಾಡಳಿತಕ್ಕೆ ದೂರುಗಳು ಬರುವುದಿಲ್ಲ. ಗುತ್ತಿಗೆದಾರರು, ಅಧೀನ ಸಿಬ್ಬಂದಿಗಳಿಗೆ ಸಾರ್ವಜನಿಕರು ಹೆದ್ದಾರಿಯ ಸಮಸ್ಯೆಗಳಿಗೆ ಸ್ಪಂದಿಸಲು ಸೂಚನೆ ನೀಡಿ, ಕಾರ್ಯನಿರ್ವಹಿಸಿ ದಾಗ ಮಾತ್ರ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು.

ಆಸುಪಾಸಿನವರಿಗೆ ಟೋಲ್ ವಿನಾಯಿತಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೆದ್ದಾರಿ ಕುಂದುಕೊರತೆಗೆ ಸಂಬಂಧಿಸಿ ದಂತೆ ಆನ್‌ಲೈನ್ ಆ್ಯಪ್ ಒಂದನ್ನು ನಿರ್ವಹಣೆ ಮಾಡುತ್ತಿದ್ದಾರೆ. ಯಾವುದೇ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಈ ಆ್ಯಪ್‌ಗೆ ದೂರನ್ನು ಅಪ್‌ಲೋಡ್ ಮಾಡುವುದು ಸೂಕ್ತ ಎಂದ ಜಿಲ್ಲಾಧಿಕಾರಿ, ಟೋಲ್ ಸಮೀಪದ 5ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ವರಿಗೆ ಈ ಹಿಂದಿನಂತೆ ವಿನಾಯಿತಿಯನ್ನು ನೀಡಲಾಗುತ್ತದೆ. ಆದರೆ ವಾಣಿಜ್ಯ ವಾಹನಗಳಿಗೆ ಇದು ಅನ್ವುಸುವುದಿಲ್ಲ ಎಂದರು.

ಬ್ರಹ್ಮಾವರದಲ್ಲಿ ಸರ್ವಿಸ್ ರಸ್ತೆ, ಮೀಡಿಯನ್ ಓಪನಿಂಗ್, ಮೇಲ್ಸೇತುವೆ ವ್ಯವಸ್ಥೆ ಬೇಕು ಎಂದು ಸ್ಥಳೀಯ ಜನರು ಮನವಿ ಮಾಡುತ್ತಿದ್ದಾರೆ. ಇವುಗಳ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಬೇಕು ಎಂದ ಡಾ.ವಿದ್ಯಾಕುಮಾರಿ, ರಸ್ತೆ ವಿಭಜಕ ತೆರವಿಗೆ, ರಸ್ತೆ ಸುರಕ್ಷತಾ ಸಭೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ವರದಿ ಆಧರಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ ಸ್ಥಳೀಯ ಪ್ರತಿನಿಧಿಗಳು ರಾಷ್ಟ್ರೀಯ ಹೆದ್ದಾರಿ ಯಲ್ಲಿ ಹೊಂಡಗಳ ರಿಪೇರಿ, ದಾರಿದೀಪಗಳ ನಿರ್ವಹಣೆ, ರಸ್ತೆಯ ಬದಿಯಲ್ಲಿ ಬೆಳೆದಿರುವ ಹುಲ್ಲುಗಳ ತೆರವು, ಪಾದಚಾರಿ ರಸ್ತೆ ನಿರ್ವಹಣೆ, ರಸ್ತೆಯ ಶೋಲ್ಡರ್ ನಿರ್ವ ಹಣೆ, ಬಿಳಿ ಪಟ್ಟಿ ಬಳಿಯುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ತಹಶೀಲ್ದಾರರು, ಗುತ್ತಿಗೆದಾರರು ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News