ಜೀವನ ಪ್ರೀತಿಯಿಂದ ಆರೋಗ್ಯ ಸಮಸ್ಯೆ ನಿವಾರಿಸಲು ಸಾಧ್ಯ: ಡಿಸಿ ಡಾ.ವಿದ್ಯಾಕುಮಾರಿ
ಉಡುಪಿ: ಸರಕಾರದ ಸೇವಾ ಕಾರ್ಯಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ರೋಟರಿ ಕ್ಲಬ್ ಕಲ್ಯಾಣಪುರ, ಲಯನ್ಸ್ ಮತ್ತು ಲೀಯೋ ಕ್ಲಬ್ ಉಡುಪಿ ಅಮೃತ್, ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ಇವುಗಳ ಜಂಟಿ ಆಶ್ರಯದಲ್ಲಿ ನಕ್ರೆ ಆದಿತ್ಯ ಸೇವಾ ಟ್ರಸ್ಟ್, ಅಳಿಲ ಭಾರತೀಯ ವಾಕ್ ಶ್ರವಣ ಸಂಸ್ಥೆ ಮೈಸೂರು ಇದರ ಸಹಯೋಗದೊಂದಿಗೆ ಗುರುವಾರ ಉಡುಪಿ ಅಂಬಾಗಿಲಿನ ಅಮೃತ ಗಾರ್ಡನ್‌ನಲ್ಲಿ ಆಯೋಜಿಸಲಾದ ಉಚಿತ ವಾಕ್ ಮತ್ತು ಶ್ರವಣ ದೋಷ ತಪಾಸಣಾ ಶಿಬಿರ ಮತ್ತು ಶ್ರವಣ ಯಂತ್ರ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಜೀವನ ಪ್ರೀತಿಯಿಂದ ಆರೋಗ್ಯ ಸಮಸ್ಯೆಗಳನ್ನು ಕುಂದುಕೊರತೆಗಳನ್ನು ನಿವಾರಿಸಲು ಸಾಧ್ಯವಿದೆ. ದಿವ್ಯಾಂಗ ಮಕ್ಕಳಿಗೆ ಶ್ರವಣ ಯಂತ್ರಗಳು ರೂಡಿಸಿಕೊಂಡಾಗ ಮಾತಿನ ಬೆಳವಣಿಗೆಯಾಗಲು ಸಾಧ್ಯವಿದೆ. ಸಾರ್ವಜನಿಕ ರಿಗೆ ಹಿತಾಸಕ್ತಿಗೆ ಸಮಾಜಮುಖಿ ಕಾರ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಸದಾ ಸಹಕರಿಸುತ್ತದೆ ಎಂದರು.
ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಅಧಿಕಾರಿ ಡಾ.ಪುಷ್ಪಾವತಿ ಮಾತನಾಡಿ, ದಿವ್ಯಾಂಗರನ್ನು ಮುಖ್ಯ ವಾಹಿನಿಗೆ ತರುವುದೆ ಸರಕಾರದ ಉದ್ದೇಶವಾಗಿದೆ. ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾಜ ಸೇವಕ ವಿಜಯ ಕೊಡವೂರ್ ಪ್ರಸ್ತಾವಿಕವಾಗಿ ಮಾತನಾಡಿ, ಶ್ರವಣ ದೋಷಮುಕ್ತ ಉಡುಪಿ ಜಿಲ್ಲೆಯಾಗಿ ನಿರ್ಮಾಣ ಮಾಡುವುದೆ ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ರೋಟರಿ ಜಿಲ್ಲಾ ಗವರ್ನರ್ ದೆವಾನಂದ್ ಮಾತನಾಡಿದರು. ಸಭೆಯಲ್ಲಿ ರಾಜರಾಂ ಭಟ್, ಪ್ರಭಾತ್ ಲಯನ್ಸ್, ರೋಟರಿ, ಆದಿತ್ಯ ಟ್ರಸ್ಟ್ ಮಂಜುನಾಥ ತೆಕ್ಕಿಲ್ಲಾಯ, ಉಪ ಗವರ್ನರ್ ಆರ್.ಎನ್.ಸಾಮಗ, ರೋಟರಿ ಅಧ್ಯಕ್ಷ ಬಾಪ್ಟಿಸ್ಟ್ ಡಯಾಸ್, ಲಯನ್ಸ್ ಕ್ಲಬ್‌ನ ಪ್ರತಿನಿಧಿ ಭಾರತಿ, ದಿವಾಕರ್, ಶಿಶಿರ್ ಶೆಟ್ಟಿ ಉಪಸ್ಥಿತರಿದ್ದರು.