ಗಂಗೊಳ್ಳಿ ಗ್ರಾಪಂ ಉಪಚುನಾವಣೆ: ಮದ್ಯ ಮಾರಾಟ ನಿಷೇಧ
ಉಡುಪಿ, ನ.28: ಗ್ರಾಮ ಪಂಚಾಯತಿಗಳ ಸಾರ್ವತ್ರಿಕ/ಉಪ ಚುನಾವಣೆ ಡಿಸೆಂಬರ್ -2024ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕುಂದಾಪುರ ತಾಲೂಕಿನ 45-ಗಂಗೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಉಪ ಚುನಾವಣೆ ನಡೆಸುವ ಸಂಬಂಧ ಡಿಸೆಂಬರ್ 8ರಂದು ಮತದಾನ ದಿನವನ್ನು ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಅಬಕಾರಿ ಕಾಯ್ದೆ ಸಾಮಾನ್ಯ ನಿಯಮಾವಳಿ 1967 ಕಲಂ (10) ಬಿರ ಪ್ರಕಾರ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308 ಎಸಿ ರಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಗಂಗೊಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಡಿ.6ರಂದು ಸಂಜೆ 5 ಗಂಟೆಯಿಂದ ಡಿಸೆಂಬರ್ 8ರ ಸಂಜೆ 5:00ರವರೆಗೆ ಎಲ್ಲಾ ರೀತಿಯ ಮದ್ಯದಂಗಡಿ, ಮದ್ಯ ಮಾರಾಟ ಡಿಪೋಗಳನ್ನು, ಮದ್ಯ ತಯಾರಿಕಾ ಡಿಸ್ಟಿಲರಿಗಳನ್ನು, ಸ್ಟಾರ್ ಹೋಟೆಲ್‌ಗಳನ್ನು, ಶೇಂದಿ ಅಂಗಡಿಗಳನ್ನು ಮುಚ್ಚಲು ಆದೇಶಿಸಿ, ಮದ್ಯ ಮಾರಾಟ ನಿಷೇಧಿಸಿ, ಒಣದಿನ ಎಂದು ಘೋಷಿಸಿ ಜಿಲ್ಲಾ ದಂಡಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶಿಸಿದ್ದಾರೆ.