ಉಡುಪಿ ಜಿಲ್ಲಾ ವಿಶೇಷ, ವಿಕಲಚೇತನ ವಿದ್ಯಾರ್ಥಿಗಳ ಕ್ರೀಡಾಕೂಟ: ಕಾರ್ಕಳ ವಿಜೇತ ಶಾಲಾ ಮಕ್ಕಳಿಗೆ ಸಮಗ್ರ ಪ್ರಶಸ್ತಿ
ಉಡುಪಿ: ಕಾರ್ಕಳದ ವಿಜೇತ ವಿಶೇಷ ಮಕ್ಕಳ ಶಾಲಾ ತಂಡ ಗುರುವಾರ ನಗರದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ವಿಶೇಷ ಶಾಲೆಗಳ ಹಾಗೂ ವಿಕಲಚೇತನ ವಿದ್ಯಾರ್ಥಿಗಳ ಕ್ರೀಡಾಕೂಟ ದಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ವಿಜೇತ ವಿಶೇಷ ಮಕ್ಕಳ ತಂಡ ಒಟ್ಟು 184 ಅಂಕಗಳನ್ನು ಗಳಿಸುವ ಮೂಲಕ ಅಗ್ರಸ್ಥಾನ ಪಡೆದರೆ ಉಡುಪಿಯ ಆಶಾ ನಿಲಯ ವಿಶೇಷ ಮಕ್ಕಳ ತಂಡ 149 ಅಂಕಗಳೊಂದಿಗೆ ರನ್ನರ್ ಅಪ್ ಬಹುಮಾನ ಗೆದ್ದುಕೊಂಡಿತು.
ಉದ್ಘಾಟನಾ ಸಮಾರಂಭದಲ್ಲಿ ನಡೆದ ವಿಶೇಷ ಮಕ್ಕಳ ಪಥಸಂಚಲನ ದಲ್ಲೂ ಕಾರ್ಕಳದ ವಿಜೇತ ವಿಶೇಷ ಶಾಲಾ ಮಕ್ಕಳು ಮೊದಲ ಬಹುಮಾನ ಗೆದ್ದುಕೊಂಡರು. ಕಾರ್ಕಳದ್ದೇ ಆದ ಚೇತನ ವಿಶೇಷ ಶಾಲೆ ದ್ವಿತೀಯ ಸ್ಥಾನ ಪಡೆದರೆ, ಉಡುಪಿಯ ಆಶಾ ನಿಲಯ ವಿಶೇಷ ಮಕ್ಕಳು ಮೂರನೇ ಸ್ಥಾನ ಪಡೆದರು.
ಒಂದು ದಿನದ ಈ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲೆಯ ಒಟ್ಟು 15 ವಿಶೇಷ ಶಾಲೆಗಳ 350ಕ್ಕೂ ಅಧಿಕ ಮಕ್ಕಳು ಅವರಿ ಗಾಗಿಯೇ ನಡೆದ ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು.
ಈ ಕ್ರೀಡಾಕೂಟವನ್ನು ಮಂಗಳೂರು ವಿಶ್ವವಿದ್ಯಾನಿಲಯ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಲಯನ್ಸ್ ಕ್ಲಬ್ ಉಡುಪಿ ಅಮೃತ್ ಹಾಗೂ ಲಿಯೋ ಡಿಸ್ಟ್ರಿಕ್ ಉಡುಪಿ ಸಂಯುಕ್ತವಾಗಿ ಹಮ್ಮಿಕೊಂಡಿತ್ತು.
ಕ್ರೀಡಾಕೂಟಕ್ಕೆ ಲಯನ್ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶೇಷ ಮಕ್ಕಳ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸೇವೆ ಅನುಪಮ ವಾದುದು. ಮಕ್ಕಳನ್ನು ಸ್ಪರ್ಧೆಗೆ ಅನುಗೊಳಿಸಿದ ರೀತಿ ಪ್ರಶಂಸನೀಯ. ಮುಂದಿನ ದಿನಗಳಲ್ಲಿ ಈ ಎಲ್ಲಾ ಮಕ್ಕಳು ಉತ್ತಮ ಭವಿಷ್ಯ ಹೊಂದುವಂತಾಗಲಿ ಎಂದು ಆಶಿಸಿದರು.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ನಿತ್ಯಾನಂದ ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದ್ದರು. ವಿಶೇಷ ಕ್ರೀಡಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಈ ಸಂದರ್ಭದಲ್ಲಿ ಲಿಯೋ ಜಿಲ್ಲಾ ಅಧ್ಯಕ್ಷೆ ಶರೋನ್ ಮಬೀನ್, ರೀಜನಲ್ ಚೇರ್ ಪರ್ಸನ್ ವಿ.ಎಸ್ ಉಮ್ಮರ್, ಲಿಯೋ ಜಿಲ್ಲಾ ಸಂಯೋಜಕ ಮೊಹಮ್ಮದ್ ಮೌಲಾ, ಲಯನ್ಸ್ ಕ್ಲಬ್ ಉಡುಪಿ ಅಮೃತ್ ಅಧ್ಯಕ್ಷ ಗೋಪಾಲ ಅಂಚನ್, ರಾಜ್ಯ ವಿಶೇಷ ಶಿಕ್ಷಕ/ ಶಿಕ್ಷಕೇತರರ ಸಂಘದ ರಾಜ್ಯಾಧ್ಯಕ್ಷೆ ಡಾ.ಶಾಂತಿ ಹರೀಶ್, ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಆಗ್ನೇಸ್ ಕುಂದರ್, ರವೀಂದ್ರ ಹೆಚ್, ಪಾಲಕರ ಸಂಘದ ಅಧ್ಯಕ್ಷ ಜಯ ವಿಠ್ಠಲ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ, ಪ್ರೊ. ಪ್ರಶಾಂತ್ ವಂದಿಸಿದರು.