ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ಸಲ್ಲ: ಮಂಜುನಾಥ್ ಗಿಳಿಯಾರ್

Update: 2024-11-28 13:55 GMT

ಕೋಟ: ರೈತ ಕಾಯಕವಿದ್ದರೆ ಸಮಾಜದಲ್ಲಿ ಬದುಕು ಜೀವಂತ. ಅಂತಹ ರೈತರ ಬಗ್ಗೆ ನಿರ್ಲಕ್ಷ್ಯೀಯ ಧೋರಣೆ ಸಲ್ಲ ಎಂದು ರೈತಧ್ವನಿ ಸಂಘದ ಹೋರಾಟಗಾರ, ನ್ಯಾಯವಾದಿ ಟಿ.ಮಂಜುನಾಥ್ ಗಿಳಿಯಾರು ಹೇಳಿದ್ದಾರೆ.

ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇವರ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ, ವಿಪ್ರ ಮಹಿಳಾ ಸಾಲಿಗ್ರಾಮ ವಲಯ, ಜೆಸಿಐ ಸಿನಿಯರ್ ಲಿಜನ್ ಕೋಟ ಇವರುಗಳ ಸಹಯೋಗದೊಂದಿಗೆ ಬುಧವಾರ ಕೋಟದ ಮಣೂರು ಪಡುಕರೆಯ ರವೀಂದ್ರ ಶೆಟ್ಟಿ ಮನೆಯಂಗಳದಿ ನಡೆದ ರೈತರೆಡೆಗೆ ನಮ್ಮ ನಡಿಗೆ 41ನೇ ಸರಣಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಪ್ರಸ್ತುತ ರೈತರು ಬೆಳೆದ ಬೆಳೆಗಳಿಗೆ ನೈಜ ಬೆಲೆ ನೀಡಲು ಮಧ್ಯವರ್ತಿ ಗಳಿಂದಾಗುತ್ತಿದೆ. ಇದರ ಪರಿಣಾಮ ರೈತ ಸಮುದಾಯ ಕೃಷಿ ಕಾಯಕದಿಂದ ಹಿಂದೆ ಸರಿಯುವ ಲಕ್ಷಣಗಳು ಗೊಚರಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಅಂತಹ ಕಾಲಘಟ್ಟಕ್ಕೆ ನಮ್ಮ ವ್ಯವಸ್ಥೆ ತಳ್ಳಲ್ಪಟ್ಟಿದೆ. ಹೀಗಾದರೆ ಮುಂದಿನ ದಿನಗಳಲ್ಲಿ ಆಹಾರದ ಬೆಲೆ ಗಗನಕ್ಕೆ ಏರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಮಾತನಾಡಿ, ಪರಿಸರದ ಹಾಗೂ ಕೃಷಿ ಭೂಮಿಯ ಮೇಲೆ ಪ್ಲಾಸ್ಟಿಕ್ ಅತಿಯಾಗಿ ವಿಜೃಂಭಿಸುತ್ತಿದೆ. ಇದು ಪ್ರತಿಯೊಂದು ಜೀವಿಗೂ ಮಾರಕವಾಗಿದೆ. ಹೊಳೆ ತೊರೆಗಳಲ್ಲೂ ಪ್ಲಾಸ್ಟಿಕ್ ಮಯವಾಗಿದೆ. ಇದರಿಂದ ಮನುಷ್ಯ ಜೀವಕ್ಕೆ ಸಂಚಕಾರಬಂದೊದಗುತ್ತಿದೆ. ಈಗಲೇ ಜಾಗೃತರಾಗುವುದು ಒಳಿತು ಎಂದು ಹೇಳಿದರು.

ಸಾಧಕ ಕೃಷಿಕ ರವೀಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿಶೇಷವಾಗಿ ಗೋಪೂಜೆ ನೆರವೇರಿಸಿ, ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು. ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು. ಎಂ.ಭಾಸ್ಕರ್ ಶೆಟ್ಟಿ ಸನ್ಮಾನಿತರ ಬಗ್ಗೆ ಪರಿಚಯಿಸಿದರು.

ಕೋಟದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಪ್ರಭಾ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ, ಗೆಳೆಯರ ಬಳಗ ಕಾರ್ಕಡ ಸದಸ್ಯ ಶೇಖರ್ ಕಾರ್ಕಡ, ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಉಪಸ್ಥಿತರಿದ್ದರು.

ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚ ವರ್ಣ ಸದಸ್ಯ ಸಂತೋಷ್ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ರವೀಂದ್ರ ಕೋಟ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News