‘ನಾಗರಿಕ ಬದುಕಿನ ಎಲ್ಲಾ ಮೌಲ್ಯಗಳು ಸಂವಿಧಾನದಲ್ಲಿ ಅಂತರ್ಗತ’
ಉಡುಪಿ: ಸಂವಿಧಾನದಿಂದಾಗಿಯೇ ನಮ್ಮ ಸ್ವಾತಂತ್ರ್ಯ ಸಾಕಾರ ಗೊಂಡಿದೆ. ನಾಗರಿಕ ಬದುಕಿ ಎಲ್ಲಾ ಮೌಲ್ಯಗಳನ್ನು ಸಂವಿಧಾನ ಅಂತರ್ಗತಗೊಳಿಸಿದೆ. ನಮ್ಮ ವರ್ತಮಾನ ಮತ್ತು ಭವಿಷ್ಯಎರಡೂ ಸಂವಿಧಾನದ ನೆಲೆಗಟ್ಟಿನಲ್ಲಿದೆ. ಕಳೆದ 75 ವರ್ಷಗಳ ಸ್ವತಂತ್ರ ಭಾರತದಲ್ಲಿ ತನ್ನ ಅಸ್ತಿತ್ವ ಮತ್ತು ಪ್ರಸ್ತುತತೆಯನ್ನು ಉಳಿಸಿಕೊಂಡಿರುವುದೇ ಇದರ ಮಹತ್ವಕ್ಕೆ ಸಾಕ್ಷಿ ಎಂದು ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸುಧಾಕರ ದೇವಾಡಿಗ ಹೇಳಿದ್ದಾರೆ.
ಸಂವಿಧಾನ ದಿನಾಚರಣೆಯ ಪ್ರಯುಕ್ತ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಸಾಂವಿಧಾನಿಕ ಮೌಲ್ಯಗಳು ಮತ್ತು ನಾಗರಿಕ ಬದುಕು ವಿಶೇಷ’ ವಿಷಯದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡುತಿದ್ದರು.
ನಮ್ಮ ಸಂವಿಧಾನ ಸಮಾನತೆ, ವ್ಯಕ್ತಿಗೌರವವನ್ನು ಕಾಪಾಡಿದೆ. ವೈವಿಧ್ಯಮಯ ಭಾರತದಲ್ಲಿ ಸಂವಿಧಾನವನ್ನು ಅರ್ಥೈಸಿ ಕೊಂಡಲ್ಲಿ ಮಾತ್ರ ಸೌಹಾರ್ದ, ಸಾಮರಸ್ಯ, ಶಾಂತಿ ಮತ್ತು ನ್ಯಾಯ ಸ್ಥಾಪನೆ ಸಾಧ್ಯ. ಆದರೆ ನಮ್ಮ ಪ್ರಜಾಪ್ರಭುತ್ವದ ಭ್ರಷ್ಟಾಚಾರ, ರಾಜಕೀಯ-ಸಾಮಾಜಿಕ ಅಪರಾಧಗಳು, ಪ್ರತ್ಯೇಕವಾದ ಇತ್ಯಾದಿಗಳು ಸಂವಿಧಾನ ಕೊಟ್ಟ ಸುಂದರ ಬದುಕಿಗೇ ಸವಾಲಾಗಿದೆ ಎಂದವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್ ಸಂವಿಧಾನ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಐಕ್ಯುಎಸಿ ಸಂಚಾಲಕಿ ಡಾ.ಮೇವಿ ಮಿರಾಂದ, ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ್ ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ರಘು ನಾಯ್ಕ್, ಎಂಎಸ್ ಡಬ್ಲ್ಯೂ ಮುಖ್ಯಸ್ಥೆ ಸುಷ್ಮಾ ಟಿ, ಬಿಸಿಎ ವಿಭಾಗ ಮುಖ್ಯಸ್ಥ ರಾಜ್ ಕುಮಾರ್, ರಾಜಕೀಯ ಶಾಸ್ತ್ರ ಉಪನ್ಯಾಸಕಿ ಆರತಿ, ಸಮಾಜಕಾರ್ಯ ಸಹಾಯಕ ಪ್ರಾಧ್ಯಾಪಕಿ ರುಬಿಯಾ, ಇತಿಹಾಸ ಉಪನ್ಯಾಸಕ ಡಾ.ಮೋಹನ್, ಡಾ. ಮಹೇಶ್ ಕುಮಾರ್ ಉಪಸ್ಥಿತರಿದ್ದರು.
ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ್ ನೀಲಾವರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಬಿಸಿಎ ವಿದ್ಯಾರ್ಥಿ ಧನುಶ್ ವಂದಿಸಿದರು. ವಿದ್ಯಾರ್ಥಿನಿ ರುತಿಕಾ ಕಾರ್ಯಕ್ರಮ ನಿರೂಪಿಸಿದರು.