ನಕಲಿ ಎನ್‌ಕೌಂಟರ್ ಮೂಲಕ ವಿಕ್ರಮ ಗೌಡ ಹತ್ಯೆ: ಸಿಡಿಆರ್‌ಒ ಸತ್ಯಶೋಧನಾ ತಂಡ ಆರೋಪ
ಹೆಬ್ರಿ: ನಕ್ಸಲ್ ನಾಯಕ ವಿಕ್ರಮ್ ಗೌಡ ಅವರ ಎನ್‌ಕೌಂಟರ್‌ಗೆ ಸಂಬಂಧಿಸಿ ಕೋರ್ಡಿನೇಷನ್ ಆಫ್ ಡೆಮಾಕ್ರಟಿಕ್ ರೈಟ್ಸ್ ಆರ್ಗನೈಸೇಶನ್ಸ್ (ಸಿಡಿಆರ್‌ಒ) ನೇತೃತ್ವದ ಸತ್ಯಶೋಧನಾ ತಂಡವು ಗುರುವಾರ ಹೆಬ್ರಿ ತಾಲೂಕಿನ ಪೀತ್‌ಬೈಲಿ ನಲ್ಲಿರುವ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಕರ್ನಾಟಕದ ಪಿಡಿಎಫ್, ತಮಿಳುನಾಡಿನ ಸಿಪಿಡಿಆರ್, ಆಂಧ್ರಪ್ರದೇಶದ ಸಿಎಲ್‌ಸಿ ಸಂಘಟನೆಗಳನ್ನೊಂಡ ಸಿಡಿಆರ್‌ಒ ಇದರ ಸತ್ಯ ಶೋಧನಾ ತಂಡವು ಪೀತ್‌ಬೈಲು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಹಲವು ಮಂದಿ ಮತ್ತು ಕರ್ನಾಟಕ ಪತ್ರಕರ್ತರನ್ನು ಭೇಟಿ ಮಾಡಿ ಹಲವು ವಿಚಾರಗಳನ್ನು ಸಂಗ್ರಹಿಸಿದೆ. ಅದರಂತೆ ತಂಡವು, ‘ಬುಡಕಟ್ಟು ನಾಯಕ ಮಾವೋವಾದಿ ವಿಕ್ರಂ ಗೌಡ ಅವರನ್ನು ನಕ್ಸಲ್ ನಿಗ್ರಹ ಪಡೆಯು ನಕಲಿ ಎನ್‌ಕೌಂಟರ್ ಮೂಲಕ ಹತ್ಯೆ ನಡೆಸಿದೆ ಎಂದು ಆರೋಪಿಸಿದೆ.
ತಂಡದಲ್ಲಿ ಪಿಡಿಎಫ್‌ನ ಶ್ರೀರಾಮ್, ರಾಮು, ಸಿಎಲ್‌ಸಿಯ ವಕೀಲ ಶ್ರೀಮನ್ನಾರಾಯಣ ನಂಬೂರಿ, ಸಿಪಿಡಿಆರ್‌ನ ಎಸ್.ಗೋಪಾಲ್ ಹಾಜರಿ ದ್ದರು. ತಂಡವು ಸಂಪರ್ಕಿಸಿದ ಮೂಲಗಳ ಹೇಳಿಕೆಗಳಿಂದ ಪಡೆದ ವಿಚಾರಗಳ ಪ್ರಕಾರ ಕೆಲವೊಂದು ತೀರ್ಮಾನಗಳಿಗೆ ಬಂದಿದೆ.
‘ಘಟನಾ ಸ್ಥಳವು ಪಶ್ಚಿಮಘಟ್ಟದ ಕಾಡಿನ ಮಧ್ಯೆ ಬಹಳಷ್ಟು ದೂರದಲ್ಲಿದೆ. ಇಲ್ಲಿ ಯಾವುದೇ ಜನವಸತಿ ಇಲ್ಲ. ಕೆಲವೇ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಜಯಂತ್ ಗೌಡ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಜಯಂತ್ ಗೌಡ ಮನೆ ಸಮೀಪ ಸುಧಾಕರ್ ಗೌಡ ಮತ್ತು ನಾರಾಯಣ ಗೌಡ ಎಂಬವರ ಮನೆ ಇದೆ. ಇವರು ಒಂದೇ ಸಮುದಾಯಕ್ಕೆ ಸೇರಿದ ಸಹೋದರರಾಗಿದ್ದಾರೆ.
ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನಾರಾಯಣ ಗೌಡ ಮತ್ತು ಸುಧಾಕರ ಗೌಡ ಅವರ ಮನೆಗಳು ಎಎನ್‌ಎಫ್ ಪಡೆಗಳ ನಿಯಂತ್ರಣದಲ್ಲಿವೆ. ಎಎನ್‌ಎಫ್ ಸಿಬ್ಬಂದಿ ಈ ಮನೆ ಹಾಗೂ ಸ್ಥಳವನ್ನು ತಮ್ಮ ಹಿಡಿತಕ್ಕೆ ತೆಗೆದು ಕೊಂಡಿರುವುದರಿಂದ ನ.18ರಿಂದ ಈ ಕುಟುಂಬಗಳು ತಮ್ಮ ಮನೆಗೆ ಇನ್ನೂ ವಾಪಾಸ್ಸು ಬಂದಿಲ್ಲ. ಈ ಪ್ರದೇಶಕ್ಕೆ ಈ ಕುಟುಂಬಗಳ ಪ್ರವೇಶವನ್ನು ನಿರ್ಬಂಧಿಸ ಲಾಗಿದೆ ಎಂದು ತಂಡ ತಿಳಿಸಿದೆ.
ಎನ್‌ಕೌಂಟರ್ ಹತ್ಯೆಯ ನಂತರ ಎಎನ್‌ಎಫ್ ಪಡೆ, ಅಲ್ಲಿದ್ದ ಸಾಕ್ಷ್ಯಗಳನ್ನು ನಾಶ ಮಾಡಿ, ಇದೊಂದು ಎನ್‌ಕೌಂಟರ್ ಎಂಬುದಾಗಿ ಸಾಬೀತು ಪಡಿಸಲು ಹೊರಟಿದೆ ಎಂಬ ಅನುಮಾನಗಳು ಕಾಡುತ್ತವೆ. ಎಎನ್‌ಎಫ್ ಪಡೆಗಳು ಕಳೆದ ಕೆಲವು ದಿನಗಳಿಂದ ಸಮೀಪದ ಪ್ರದೇಶಗಳಲ್ಲಿ ವಿಕ್ರಮ್ ಗೌಡನ ಚಲನವಲನ ಗಳನ್ನು ಗಮನಿಸುತ್ತಿದ್ದವು ಎಂದು ತಿಳಿದುಬಂದಿದೆ. ಬಳಿಕ ಯಾವುದೇ ಸ್ಪಷ್ಟ ಸಾಕ್ಷ್ಯಗಳಿಲ್ಲದ ದೂರದ ಸ್ಥಳದಲ್ಲಿ ವಿಕ್ರಮ್ ಗೌಡ ಅವರನ್ನು ಎನ್‌ಕೌಂಟರ್ ಮೂಲಕ ಹತ್ಯೆ ಮಾಡಲಾಗಿದ್ದು, ಇದರಿಂದ ಇದೊಂದು ಯೋಜಿತ ಕಸ್ಟಡಿ ಹತ್ಯೆ ಆಗಿರಬಹುದೆಂಬ ಸಂಶಯ ಮೂಡಿಸುತ್ತದೆ ಎಂದು ತಂಡ ತಿಳಿಸಿದೆ.
ಆದುದರಿಂದ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವ ದಲ್ಲಿ ನ್ಯಾಯಾಂಗ ಆಯೋಗವನ್ನು ಸ್ಥಾಪಿಸ ಬೇಕು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಯಂತೆ ಎಎನ್‌ಎಫ್ ವಿರುದ್ಧ 103 ಬಿಎನ್‌ಎಸ್ (ಹೊಸ ಕಾನೂನು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕು. ಎನ್‌ಕೌಂಟರ್‌ನಲ್ಲಿ ಭಾಗಿಯಾಗಿರುವ ಎಎನ್‌ಎಫ್ ಅಧಿಕಾರಿಗಳನ್ನು ಅಮಾನತುಗೊಳಿಸಿ, ಬಂಧಿಸಬೇಕು ಎಂದು ತಂಡ ಒತ್ತಾಯಿಸಿದೆ.
ಈ ಪ್ರದೇಶಗಳಲ್ಲಿರುವ ಅರೆಸೇನಾ ಪಡೆಗಳನ್ನು ಕೂಡಲೇ ವಾಪಾಸ್ಸು ಕರೆಸ ಬೇಕು. ಎಲ್ಲ ಎನ್‌ಕೌಂಟರ್ ಹತ್ಯೆಗಳನ್ನು ಹತ್ಯೆಗಳನ್ನು ತಕ್ಷಣವೇ ನಿಲ್ಲಿಸಬೇಕು. ಎಲ್ಲಾ ಕಾನೂನು ಕಾರ್ಯವಿಧಾನಗಳನ್ನು ಉಲ್ಲಂಘಿಸುವ ಮತ್ತು ಭ್ರಷ್ಟಗೊಳಿ ಸುವ ಎನ್‌ಕೌಂಟರ್ ಹತ್ಯೆಗಳಿಗೆ ಪ್ರಶಸ್ತಿ, ಪುರಸ್ಕಾರಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಸತ್ಯಶೋಧನಾ ತಂಡ ಆಗ್ರಹಿಸಿದೆ.