ಯಾವುದೇ ಪ್ರಗತಿಯೇ ಇಲ್ಲದೆ ಪ್ರಗತಿ ಪರಿಶೀಲನಾ ಸಭೆ ಯಾಕೆ ?

Update: 2024-11-30 16:18 GMT

ಉಡುಪಿ, ನ.30: ಜಿಲ್ಲೆಯ ಬಗ್ಗೆ ಆಸಕ್ತಿಯೇ ಇಲ್ಲದ, ಸ್ಪಷ್ಟತೆ ಇಲ್ಲದ, ಅಭಿವೃದ್ಧಿ ಬಗ್ಗೆ ದಿಕ್ಸೂಚಿ ಇಲ್ಲದ ಜಿಲ್ಲಾ ಉಸ್ತುವಾರಿ ಸಚಿವರು ಬರೋಬ್ಬರಿ 11 ತಿಂಗಳ ಬಳಿಕ ನಡೆಸಿದ ತ್ರೈಮಾಸಿಕ ಕೆಡಿಪಿ ಸಭೆ ಖೇಧಕರ. ಇದು ಜಿಲ್ಲೆಯಲ್ಲಿ ಯಾವುದೇ ಪ್ರಗತಿಯೇ ಇಲ್ಲದೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಾಗಿದೆ ಎಂದು ಕಾರ್ಕಳ ಶಾಸಕ ವಿ.ಸುನಿಲ್‌ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಇಂದು ಮಣಿಪಾಲದ ಜಿಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಸಭೆ ಮುಗಿದ ಬಳಿಕ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಕಚೇರಿಯಲ್ಲಿ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಐವರು ಬಿಜೆಪಿ ಶಾಸಕರ ಪರವಾಗಿ ಸುನಿಲ್ ಕುಮಾರ್ ಮಾತನಾಡಿದರು.

ನಾವು ಐದು ಜನ ಶಾಸಕರು ಕೆಡಿಪಿಯಲ್ಲಿ ಅತ್ಯಂತ ತಾಳ್ಮೆಯಿಂದ ಜಿಲ್ಲೆಯ ಆಡಳಿತ ಯಾವ ರೀತಿ ಕುಸಿದಿದೆ. ದಿಕ್ಕುದಿಸೆಯಿಲ್ಲದೇ ಆಡಳಿತ ಯಾವ ರೀತಿ ನಡೆಯುತ್ತಿದೆ ಎಂಬುದನ್ನು ಎಳೆಎಳೆಯಾಗಿ ಬಿಡಿಸು ಹೇಳುವ ಪ್ರಯತ್ನವನ್ನು ಮಾಡಿದ್ದೇವೆ. ಅಭಿವೃದ್ಧಿ ಶೂನ್ಯವಿರುವ ಜಿಲ್ಲೆಯ ಪ್ರಗತಿ ಪರಿಶೀಲನೆ ಇದಾಗಿದೆ ಎಂದವರು ಟೀಕಿಸಿದರು.

ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಒಂದು ನಯಾಪೈಸೆ ಅನುದಾನವನ್ನು ಸರಕಾರ ನೀಡಿಲ್ಲ. ಸಭೆಯ ಪ್ರಾರಂಭದಲ್ಲೇ ನಾವು ಕಳೆದ ಆಗಸ್ಟ್ ತಿಂಗಳಲ್ಲಿ ಜಿಲ್ಲೆಗೆ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ, 2023ರ ಮಳೆಹಾನಿಗೆ 60 ಕೋಟಿ ರೂ.ಅನುದಾನ ನೀಡುವ ಘೋಷಣೆ ಮಾಡಿದ್ದು, ಅಂದಿನ ಕೆಡಿಪಿಯಲ್ಲಿ ಒಪ್ಪಿಕೊಂಡಿದ್ದರು. ಆದರೆ ಒಂದು ರೂಪಾಯಿ ಅನುದಾನವೂ ಅದರಲ್ಲಿ ಬಂದಿಲ್ಲ ಎಂದರು.

ಜಿಲ್ಲೆಯಲ್ಲಿ ಕಾಲುಸಂಕ ನಿರ್ಮಾಣಕ್ಕೆ 50 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ನ್ನು ಘೋಷಿಸಿದ್ದರು.ಮುಖ್ಯಮಂತ್ರಿ ಬಂದು ಹೋದ ಒಂದೂವರೆ ವರ್ಷದ ಬಳಿಕ ಬಂದ ಹಣದ ಮಾಹಿತಿ ಕೇಳಿದರೆ ಉಸ್ತುವಾರಿ ಸಚಿವರು ಅಸಹಾಯಕರಾಗಿ ತಲೆತಗ್ಗಿಸಿ ನಿಲ್ಲಬೇಕಾಯಿತು ಎಂದರು.

ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಅನುದಾನ ಬರುತ್ತಿಲ್ಲ ಎಂಬುದನ್ನು ಅಧಿಕಾರಿಗಳು ಹಾಗೂ ಸಚಿವರೇ ಒಪ್ಪಿಕೊಂಡಿದ್ದಾರೆ. ಶಾಸಕರ ಗಮನಕ್ಕೆ ಬಾರದೇ ಅಕ್ರಮ-ಸಕ್ರಮದ 16,000 ಅರ್ಜಿಗಳನ್ನು ತಿರಸ್ಕರಿಸುವ ನಿರ್ಧಾರಕ್ಕೆ ಅಧಿಕಾರಿಗಳು ಬಂದಿ ದ್ದಾರೆ. ಈ ಮೂಲಕ ಶಾಸಕರ ಅಧಿಕಾರ ಮೊಟಕುಗೊಳಿಸುವ ಹುನ್ನಾರ ರಾಜ್ಯ ಸರಕಾರದಿಂದ ನಡೆಯುತ್ತಿದೆ ಎಂದು ಅವರು ಕಿಡಿಕಾರಿದರು.

ಜಿಲ್ಲಾಡಳಿತಕ್ಕೂ, ಉಸ್ತುವಾರಿ ಸಚಿವರಿಗೂ ತಾಳಮೇಳ ಇಲ್ಲವಾಗಿದೆ ಎಂದ ಸುನಿಲ್‌ಕುಮಾರ್, ರಾಜ್ಯ ಸರಕಾರ ಹಾಗೂ ಉಸ್ತುವಾರಿ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದರು. ಅಧಿಕಾರಿಗಳನ್ನು ಏನೇ ಕೇಳಿದರೂ ಬೆಂಗಳೂರಿಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ. ಇವರದು ಕೇವಲ ಪತ್ರ ವ್ಯವಹಾರ ಮಾತ್ರ. ಅಭಿವೃದ್ಧಿ ಮಾತ್ರ ಶೂನ್ಯ ಎಂದರು.

ಜಿಲ್ಲೆಯ ಐವರು ಶಾಸಕರನ್ನು ಇರಿಸಿಕೊಂಡು ಬೆಂಗಳೂರಿನಲ್ಲಿ ಒಂದೇ ಒಂದು ಸಭೆ ನಡೆಸಿಲ್ಲ. ಒಂದು ರೂಪಾಯಿ ಅನುದಾನ ನೀಡದೇ ಯಾಕೆ ಕೆಡಿಪಿ ಸಭೆ ಎಂದು ಪ್ರಶ್ನಿಸಿದ ಅವರು, ಇದು ಪ್ರಗತಿ ಪರಿಶೀಲನೆ ಎಂದರೆ ಕಾಂಗ್ರೆಸ್ ಪ್ರಗತಿ ಪರಿಶೀಲನೆ ಎಂದು ಲೇವಡಿ ಮಾಡಿದರು.

ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಉಡುಪಿ ಸೇರಿದಂತೆ ಮೂರು ಜಿಲ್ಲೆಗಳ ಶಾಸಕರು ದೊಡ್ಡ ಪ್ರಮಾಣದಲ್ಲಿ ಧ್ವನಿ ಎತ್ತುತ್ತೇವೆ. ಎಲ್ಲಾ ಸಮಸ್ಯೆಗಳೂ ಉಲ್ಬಮಗೊಳ್ಳುತ್ತಿವೆ. ಯಾವುದಕ್ಕೂ ಪರಿಹಾರ ಇಲ್ಲ. ಜಿಲ್ಲೆಯ ವಿವಿಧ ಸಮಸ್ಯೆಗಳ ಕುರಿತು ಜನತೆಯೂ ಆಕ್ರೋಶಿತರಾಗಿದ್ದಾರೆ. ಅರಾಜಕತೆ ನಿರ್ಮಾಣಗೊಳ್ಳಬಹುದು. ನಾವು ಜನರು ಪರವಾಗಿ ನಿಲ್ಲುತ್ತೇವೆ ಎಂದು ಸುನಿಲ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಗೂ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News