ಅವೈಜ್ಞಾನಿಕ ಕಾಮಗಾರಿ ತಕ್ಷಣವೇ ಸ್ಥಗಿತಗೊಳಿಸಿ: ಜಯ ಕೋಟ್ಯಾನ್
ಉಡುಪಿ: ಅಂಬಲಪಾಡಿ ಜಂಕ್ಷನ್‌ನಲ್ಲಿ ತರಾತುರಿಯ ಅವೈಜ್ಞಾನಿಕ ಅಂಡರ್ ಪಾಸ್ ಮೇಲ್ಸೇತುವೆ ಕಾಮಗಾರಿ ನಡೆಸುತ್ತಿ ರುವುದಾಗಿ ಆರೋಪಿಸಿ ಅಂಬಲಪಾಡಿ ಹೆದ್ದಾರಿ ಬಳಕೆದಾರರ ವೇದಿಕೆ ವತಿಯಿಂದ ಇಂದು ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹೆದ್ದಾರಿ ಬಳಕೆದಾರರ ವೇದಿಕೆ ಅಂಬಲಪಾಡಿ ಇದರ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮಾತನಾಡಿ, ಅಂಬಲಪಾಡಿ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಯಾವುದೇ ನೀಲಾನಕಾಶೆಯನ್ನು ಪ್ರಕಟಿಸದೆ ಏಕಾಏಕಿ ಯಾಗಿ ತರಾತುರಿಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿದೆ. ಸಂಸದರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜನರಿಗೆ ಕಾಮಗಾರಿಯ ಬಗ್ಗೆ ಮಾಹಿತಿ ನೀಡಬೇಕು. ಯಾವುದೇ ಮುನ್ಸೂಚನೆ ನೀಡಿದೆ ಆರಂಭಿಸಿರುವ ಈ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಮಲ್ಪೆ-ಮೊಣಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಮಲ್ಪೆಯ ಮೀನುಗಾರಿಕಾ ಚಟುವಟಿಕೆ ಗಳು ಬಹುತೇಕವಾಗಿ ಈ ರಸ್ತೆಗಳನ್ನೇ ಅವಲಂಬಿಸಿವೆ. ಹೆದ್ದಾರಿ ಕಾಮಗಾರಿಯಿಂದ ಮಲ್ಪೆ ಮೀನುಗಾರಿಕೆಗೆ ದೊಡ್ಡ ಮಟ್ಟದ ಹೊಡೆತ ಬೀಳುತ್ತದೆ. ಆದ್ದರಿಂದ ಕಾಮಗಾರಿಯನ್ನು ತಕ್ಷಣವೇ ಸ್ಥಗಿತಗೊಳಿಸಿ, ವ್ಯವಸ್ಥಿತ ರೂಪುರೇಷೆ ಯೊಂದಿಗೆ ಕಾಮಗಾರಿ ಆರಂಭಿಸಬೇಕು. ಪ್ರಸ್ತುತ ನಡೆಯುತ್ತಿರುವ ಮೇಲ್ಸೇತುವೆ ಅಂಡರ್ ಪಾಸ್ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಎಲಿವೇಟೆಡ್ ಫ್ಲೈ ಓವರ್ ನಿರ್ಮಾಣ ಮಾಡಬೇಕು. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸ ಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಮೊಗವೀರ ಯುವ ಸಂಘಟನೆಯ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಶಿವರಾಮ ಕೋಟ ಮಾತನಾಡಿ, ಈ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ ವಾಗಿದೆ. ಮೇಕಿಂಗ್ ಇಂಡಿಯಾ, ಡಿಜಿಟಲ್ ಇಂಡಿಯಾದ ಕಾಲದಲ್ಲಿ ನಾವು 500ವರ್ಷ ಮುಂದಿನ ಯೋಜನೆ ಹಾಕಬೇಕು. ಅದರ ಬದಲಾಗಿ ನಾವು ಬಹಳಷ್ಟು ಹಿಂದಕ್ಕೆ ಸರಿದಿದ್ದೇವೆ. ದಂಡೆಯನ್ನು ನಿರ್ಮಿಸಿ ಪೇಟೆಯನ್ನು ಭಾಗ ಮಾಡಿ ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ, ಉದ್ಯಮಿದಾರರಿಗೆ ತೊಂದರೆ ಮಾಡುವ ನಿಟ್ಟಿನಲ್ಲಿ ಕಾಮಗಾರಿ ಆರಂಭಿಸಲಾಗಿದೆ ಎಂದು ಆರೋಪಿಸಿದರು.
ನಾವು ಉದ್ಯಮಿಗಳ ಪರವಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ಅಪಪ್ರಚಾರ ಮಾಡಲಾಗುತ್ತಿದೆ. ನಾವು ಯಾವುದೇ ಅಭಿವೃದ್ಧಿ ಕಾರ್ಯದ ವಿರುದ್ಧ ಹೋರಾಟ ಮಾಡುತ್ತಿಲ್ಲ. ಆದರೆ ಉಡುಪಿಯನ್ನು ಇಬ್ಭಾಗ ಮಾಡುವ ಕಾಮಗಾರಿಯನ್ನು ಬಿಟ್ಟು, ವೈಜ್ಞಾನಿಕವಾಗಿ ಫಿಲ್ಲರ್‌ಗಳನ್ನು ನಿರ್ಮಿಸಿ ಎಲಿವೇಟೆಡ್ ಪ್ಲೈಓವರ್ ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮೀನುಗಾರ ಮುಖಂಡರಾದ ಕಿಶೋರ್ ಡಿ.ಸುವರ್ಣ, ದಯಾನಂದ್ ಕುಂದರ್, ಮಂಜು ಕೊಳ, ರವಿ ಶ್ರಿಯಾನ್, ಉದ್ಯಮಿ ಹರಿಯಪ್ಪ ಕೋಟ್ಯಾನ್, ರಮೇಶ್ ಕೋಟ್ಯಾನ್, ಮೊಗವೀರ ಯುವ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಜಯಂತ್ ಅಮೀನ್, ಮಾಜಿ ಅಧ್ಯಕ್ಷರಾದ ರಾಜೇಂದ್ರ ಹಿರಿಯಡ್ಕ, ವಿನಯ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಕೂಡ ಹಾಜರಿದ್ದರು. ಪ್ರತಿಭಟನಾ ಸ್ಥಳದಲ್ಲಿ ಉಡುಪಿ ಡಿವೈಎಸ್ಪಿ ಜಿ.ಟಿ.ಪ್ರಭು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
‘ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಂತೆ ಈ ರಸ್ತೆ ಕಾಮಗಾರಿ ಕೂಡ ಸಾಕಷ್ಟು ಕುಂಠಿತವಾಗಿ ಸಾಗುವ ಆತಂಕ ಇದೆ. ಇದರಿಂದ ಕೋಟ್ಯಂತರ ರೂ. ವ್ಯವಹಾರ ನಡೆಯುವ ಮಲ್ಪೆ ಬಂದರು ಮತ್ತು ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುವ ಮಲ್ಪೆ ಬೀಚ್‌ನ ಪ್ರವಾಸೋದ್ಯಮಕ್ಕೆ ಬಹಳಷ್ಟು ದೊಡ್ಡ ಹೊಡೆತ ಬೀಳಲಿದೆ’
-ಕಿಶೋರ್ ಡಿ.ಸುವರ್ಣ, ಮೀನುಗಾರ ಮುಖಂಡರು