ಗಂಗೊಳ್ಳಿ ಬಂದರು ಕಾಮಗಾರಿ ಶೀಘ್ರ ಆರಂಭಕ್ಕೆ ಒತ್ತಾಯ
ಬೈಂದೂರು, ಡಿ.18: ಗಂಗೊಳ್ಳಿ ಬಂದರಿನ ಅಭಿವೃದ್ಧಿಗೆ ಮಂಜೂರಾದ ಮೊತ್ತವನ್ನು ಕೂಡಲೇ ವಿನಿಯೋಗಿಸಲು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಬೆಳಗಾವಿ ಅಧಿವೇಶನದಲ್ಲಿ ಒತ್ತಾಯಿಸಿದರು.
ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಂಸದ ಬಿವೈ ರಾಘವೇಂದ್ರ ರವರ ಶಿಫಾರಸ್ಸಿನ ಮೇರೆಗೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಮೂಲ ಸೌಕರ್ಯ ಅಭಿವೃದ್ಧಿಗೆ 22.18 ಕೋ.ರೂ. ಮೊತ್ತಕ್ಕೆ ಕೇಂದ್ರ ಸರಕಾರ ಈಗಾಗಲೇ ಅನುಮೋದನೆ ನೀಡಿದ್ದು. ಶೇ60:40 ಅನುಪಾತದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು ರಾಜ್ಯದ ಪಾಲಿನ ಅನುದಾನ ಬಿಡುಗಡೆ ಬಾಕಿ ಇರುವುದರಿಂದ ಈ ಕೂಡಲೇ ಸದರಿ ಮೊತ್ತವನ್ನು ಬಿಡುಗಡೆಗೊಳಿಸಿ ಬಂದರಿನ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಬೇಕೆಂದು ಅವರು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಮಾಂಕಾಳ್ ವೈದ್ಯ, ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಮಂಜೂರಾದ ಮೊತ್ತಕ್ಕೆ ರಾಜ್ಯ ಸರಕಾರದ ಆಡಳಿತ ಮಂಜೂರಾತಿ ಬಾಕಿ ಇದೆ ಎಂದು ಅವರು ತಿಳಿಸಿದರು.