ರೈತ ನಾಯಕ ದಲ್ಲೆವಾಲರ ಪ್ರಾಣ ಉಳಿಸಲು ಕೇಂದ್ರ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಮನವಿ
ಉಡುಪಿ: ಸಂಯುಕ್ತ ಹೋರಾಟ ಕರ್ನಾಟಕ ಉಡುಪಿ ಜಿಲ್ಲೆ, ಕರ್ನಾಟಕ ಪ್ರಾಂತ ರೈತ ಸಂಘ ಉಡುಪಿ ಜಿಲ್ಲಾ ಸಂಚಾಲನ ಸಮಿತಿ ಹಾಗೂ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಐತಿಹಾಸಿಕ ದೆಹಲಿ ರೈತ ಹೋರಾಟದ ವಾಪಾಸ್ಸಾತಿ ಸಂದರ್ಭದಲ್ಲಿ ನೀಡಿದ ಲಿಖಿತ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಮರ ಣಾಂತ ಉಪವಾಸ ಕುಳಿತಿರುವ ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ ಅವರ ಪ್ರಾಣ ಉಳಿಸಲು ತಕ್ಷಣ ಕೇಂದ್ರ ಸರಕಾರ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿ ಮೂಲಕ ರಾಷ್ಟಪತಿಗಳಿಗೆ ಹಾಗೂ ಪ್ರಧಾನ ಮಂತ್ರಿಗೆ ಇಂದು ಮನವಿ ಸಲ್ಲಿಸಲಾಯಿತು.
ಹಿರಿಯ ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲರವರ ಪ್ರಾಣ ಉಳಿಸಲು ಸರಕಾರ ಕ್ರಮ ವಹಿಸಬೇಕು ಮತ್ತು ಕೂಡಲೇ ಸಂಯುಕ್ತ ಕಿಸಾನ್ ಮೋರ್ಚಾ ನಾಯಕತ್ವದ ಜೊತೆ ಹಾಗೂ ದೆಹಲಿ ಗಡಿಗಳಲ್ಲಿ ಹೋರಾಟ ನಿರತರ ಜೊತೆ ಮಾತುಕತೆ ಆರಂಭಿಸಬೇಕು. ಎಲ್ಲಾ ರೈತರ ಕೃಷಿ ಉತ್ಪನ್ನಗಳನ್ನು ಕನಿಷ್ಟ ಬೆಂಬಲ ಬೆಲೆ ಖಾತರಿ ನೀಡುವ ಕಾನೂನು ಜಾರಿ ಮಾಡಬೇಕು. ಎಲ್ಲಾ ರೈತರ ಎಲ್ಲಾ ರೀತಿಯ ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು.
ವಿದ್ಯುತ್ ಖಾಸಗೀಕರಣ ಮಾಡಬಾರದು. ವಿವಿಧ ಕಡೆ ನಡೆಯುತ್ತಿರುವ ಖಾಸಗೀಕರಣ ಹಾಗೂ ಪಂಪ್ ಸೆಟ್ ಮೀಟರೀಕರಣದ ಪ್ರಯತ್ನ ಕೂಡಲೇ ನಿಲ್ಲಿಸಬೇಕು. ೬೦ ವರ್ಷ ದಾಟಿರುವ ಎಲ್ಲಾ ಕೃಷಿಕರಿಗೆ ರೂ. 5000 ಮಾಸಿಕ ಪಿಂಚಣಿ ನೀಡಬೇಕು. ಐತಿಹಾಸಿಕ ದೆಹಲಿ ರೈತ ಹೋರಾಟ ಮುಂದಿಟ್ಟಿದ್ದ ಎಲ್ಲಾ ಹಕ್ಕೋತ್ತಾಯಗಳನ್ನು ಈಡೇರಿಸಬೇಕು. ರೈತ ವಿರೋಧಿ, ಕರಾಳ ಕೃಷಿ ಕಾಯ್ದೆಯ ತದ್ರೂಪಾಗಿರುವ ಕೃಷಿ ಮಾರುಕಟ್ಟೆ ರಾಷ್ಟ್ರೀಯ ಚೌಕಟ್ಟು ಧೋರಣೆ ವಾಪಸ್ಸು ಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿಯನ್ನು ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಉಡುಪಿ ಜಿಲ್ಲಾ ಸಂಚಾಲಕ ಚಂದ್ರಶೇಖರ್, ರೈತ ಸಂಘದ ಮುಖಂಡರಾದ ಅನಿಲ್ ಬಾರಕೂರು, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಮುಖಂಡ ರಾದ ವೆಂಕಟೇಶ್ ಕೋಣಿ, ಉಡುಪಿ ಜಿಲ್ಲಾ ಕಾರ್ಯದರ್ಶಿ ಕವಿರಾಜ್ ಎಸ್.ಕಾಂಚನ್, ಮುಂಡರಾದ ಉಮೇಶ್ ಕುಂದರ್, ನಳಿನಿ ಹಾಗೂ ಕಟ್ಟಡ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.