ರಾಜ್ಯಮಟ್ಟದ ವಕೀಲರ ಕ್ರಿಕೆಟ್, ವಾಲಿಬಾಲ್, ತ್ರೋಬಾಲ್, ಬ್ಯಾಡ್ಮಿಂಟನ್ ಟೂರ್ನಿ
ಉಡುಪಿ, ಜ.13: ಉಡುಪಿ ವಕೀಲರ ಸಂಘ ಮತ್ತು ನ್ಯಾಯಾಲಯಗಳ ಶತಮಾನೋತ್ತರ ರಜತ ಮಹೋತ್ಸವದ ಅಂಗವಾಗಿ ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ವಕೀಲರಿಗಾಗಿ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್, ವಾಲಿಬಾಲ್(ಪುರುಷರಿಗೆ), ತ್ರೋಬಾಲ್(ಮಹಿಳೆಯರಿಗೆ) ಮತ್ತು ಶಟಲ್ ಬ್ಯಾಡ್ಮಿಂಟನ್(ಪುರುಷ-ಮಹಿಳೆಯರಿಗೆ) ಟೂರ್ನಿಯನ್ನು ಉಡುಪಿ ಎಂಜಿಎಂ ಕಾಲೇಜಿನ ಎಎಲ್‌ಎನ್ ರಾವ್ ಕ್ರೀಡಾಂಗಣದಲ್ಲಿ ಮಾ.1 ಮತ್ತು 2ರಂದು ಆಯೋಜಿಸಲಾಗಿದೆ.
ಉಡುಪಿ ನ್ಯಾಯಾಲಯ ಸಂಕೀರ್ಣದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ 1,11,111ರೂ., ದ್ವಿತೀಯ 55,555ರೂ., ತೃತೀಯ 25,555ರೂ., ನಾಲ್ಕನೇ ಸ್ಥಾನಕ್ಕೆ 11,111ರೂ., ವಾಲಿಬಾಲ್‌ನಲ್ಲಿ ಪ್ರಥಮ 66,666ರೂ., ದ್ವಿತೀಯ 33,333ರೂ., ತೃತೀಯ 22,222ರೂ., ತ್ರೋಬಾಲ್‌ನಲ್ಲಿ ಪ್ರಥಮ 33,333ರೂ., ದ್ವಿತೀಯ 22,222ರೂ., ತೃತೀಯ 11,111ರೂ. ಮತ್ತು ಶಟ್ಲ್ ಬ್ಯಾಡ್ಮಿಂಟನ್‌ನಲ್ಲಿ ಪ್ರಥಮ 11,111ರೂ., ದ್ವಿತೀಯ 6,666ರೂ., ರೂ. ನಗದು ಬಹುಮಾನ ಹಾಗೂ ಶಾಶ್ವತ ಫಲಕ ನೀಡಲಾಗುವುದು ಎಂದರು.
ಪ್ರತಿ ವಿಭಾಗದಲ್ಲಿನ ಉತ್ತಮ ಆಟಗಾರರಿಗೆ ವೈಯಕ್ತಿಕ ಬಹುಮಾನ ನೀಡಲಾಗುವುದು. ಪಂದ್ಯಾಟವನ್ನು ಮಾ.1ರಂದು ಸಂಜೆ 4ಗಂಟೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಉದ್ಘಾಟಿಸಲಿರುವರು. ಮಾ.2ರಂದು ಸಂಜೆ 7ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಪಿ.ಪಿ.ಹೆಗ್ಡೆ ಸಮಾರೋಪ ಭಾಷಣ ಮಾಡಲಿರುವರು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಂದ್ಯಾಟದ ಬ್ರೋಶರನ್ನು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್ ಬಿಡುಗಡೆ ಗೊಳಿಸಿದರು. ಪೋಕ್ಸೋ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ನ್ಯಾಯಾಧೀಶ ಪುರುಷೋತ್ತಮ ಎಂ. ಹಾಜರಿದ್ದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್., ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕುಮಾರ್, ಕ್ರೀಡಾ ಕಾರ್ಯದರ್ಶಿ ಸುಮಿತ್ ಎಸ್.ಹೆಗ್ಡೆ, ಖಜಾಂಚಿ ಗಂಗಾಧರ ಎಚ್.ಎಂ., ಉಪಸಮಿತಿ ಸಂಚಾಲಕರಾದ ಎಂ.ಶಾಂತರಾಮ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ ಸತೀಶ್ ಎಂ.ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.