ಉಡುಪಿ ಜಿಲ್ಲೆಯಾದ್ಯಂತ ತಂಪೆರೆದ ಗಾಳಿ ಮಳೆ: ಕಾರ್ಕಳದಲ್ಲಿ ಧರೆಗೆ ಉರುಳಿದ ಮರಗಳು

ಉಡುಪಿ, ಮಾ.25: ಉಡುಪಿ ಜಿಲ್ಲೆಯಾದ್ಯಂತ ಇಂದು ಸಂಜೆ ವೇಳೆ ಗುಡುಗು ಸಹಿತ ಗಾಳಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಆ ಮೂಲಕ ಎಲ್ಲೆಡೆ ತಂಪಿನ ವಾತಾವರಣ ಕಂಡುಬಂದಿದೆ.
ಉಡುಪಿ ಜಿಲ್ಲೆಯಲ್ಲಿ ದಿನವಿಡೀ ಉರಿ ಬಿಸಿಲು ಸೆಕೆಯ ವಾತಾವರಣ ಇದ್ದು, ಕೆಲವು ಕಡೆ ಬೆಳಗ್ಗೆ ಮಂಜು, ಮೋಡದಿಂದ ಕೂಡಿತ್ತು. ಇದರಿಂದಾಗಿ ತಾಪಮಾನದಲ್ಲೂ ಏರಿಳಿತವಾಗುತ್ತಿದ್ದು, ಇದೀಗ ಕಾರ್ಕಳದ ಹಲವೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಗಾಳಿಯ ರಭಸಕ್ಕೆ ಹಲವು ಕಡೆ ಮರಗಳು ರಸ್ತೆಗೆ ಉರುಳಿ ಬಿದ್ದಿದು ವಾಹನ ಸಂಚಾರಕ್ಕೆ ಅಡ್ಡಿಯಾಗಿರುವುದು ತಿಳಿದು ಬಂದಿದೆ.
ಕಾರ್ಕಳದ ಕೆಲವು ಕಡೆ ಅಂಗಡಿ ಹಾಗೂ ಮನೆಯ ಮೇಲ್ಛಾವಣಿ ಹಾರಿಹೋಗಿದೆ ಕಾರ್ಕಳ ಪೇಟೆ ಭಾಗ, ಕುಕ್ಕುಂದೂರು, ಮಿಯ್ಯಾರು, ರೆಂಜಾಲ, ಬಜಗೋಳಿ, ದಿಡಿಂಬಿರಿ, ಮಾಳ, ನೆಲ್ಲಿಕಾರು, ಕೆರ್ವಾಶೆಯಲ್ಲಿ ಉತ್ತಮ ಮಳೆಯಾಗಿದೆ. ಕೆಲವು ಕಡೆ ಗುಡುಗು ಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಅದೇ ರೀತಿ ಮಣಿಪಾಲ, ಉಡುಪಿ ನಗರ, ಬ್ರಹ್ಮಾವರ, ಕುಂದಾಪುರದಲ್ಲಿ ಮಳೆಯಾಗಿದ್ದು, ವಾತಾವರಣ ತಂಪಾಗಿದೆ. ಕುಂದಾಪುರ ತಾಲೂಕಿನ ಹಲವೆಡೆ ಮಂಗಳವಾರ ಸಂಜೆ ತುಂತುರು ಮಳೆಯಾಗಿದ್ದು, ಸಂಜೆಯಿಂದ ಮೋಡ ಕವಿದ ವಾತಾವರಣ ಕಂಡುಬಂದಿದೆ. ಬಳಿಕ ಅಲ್ಲಲ್ಲಿ ಕೊಂಚ ಮಳೆಯಾದ ಬಗ್ಗೆ ವರದಿಯಾಗಿದೆ. ಬೈಂದೂರು ತಾಲೂಕಿನಲ್ಲೂ ಮೋಡ ಕವಿದ ವಾತಾವರಣವಿತ್ತು.
2 ದಿನ ಮಳೆಯ ಮುನ್ಸೂಚನೆ: ರಾಜ್ಯ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರೀ ಗುಡುಗು-ಸಿಡಿಲು ಸಹಿತ ಮಳೆಯ ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ.