ಎಲ್ಲಾ ತಪ್ಪಿತಸ್ಥರು, ಅಪರಾಧ ಕೃತ್ಯ ಬೆಂಬಲಿಸಿದವರ ವಿರುದ್ಧ ಕ್ರಮಕೈಗೊಳ್ಳಿ: ಪೊಲೀಸರಿಗೆ ಪ.ಜಾ ಮತ್ತು ಬುಡಕಟ್ಟು ಮಹಾ ಒಕ್ಕೂಟ ಒತ್ತಾಯ

Update: 2025-03-25 21:36 IST
ಎಲ್ಲಾ ತಪ್ಪಿತಸ್ಥರು, ಅಪರಾಧ ಕೃತ್ಯ ಬೆಂಬಲಿಸಿದವರ ವಿರುದ್ಧ ಕ್ರಮಕೈಗೊಳ್ಳಿ: ಪೊಲೀಸರಿಗೆ ಪ.ಜಾ ಮತ್ತು ಬುಡಕಟ್ಟು ಮಹಾ ಒಕ್ಕೂಟ ಒತ್ತಾಯ
  • whatsapp icon

ಉಡುಪಿ, ಮಾ.25: ಮಲ್ಪೆ ಬಂದರು ಪ್ರದೇಶದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬರನ್ನು ಮೀನು ಕದ್ದ ಆರೋಪದಲ್ಲಿ ಅಮಾನವೀಯವಾಗಿ ಮರಕ್ಕೆ ಕಟ್ಟಿಹಾಕಿ ಥಳಿಸಿದ ಪ್ರಕರಣದಲ್ಲಿ ಎಲ್ಲ ತಪ್ಪಿತಸ್ಥರ ವಿರುದ್ಧ ಮತ್ತು ಈ ಹೇಯ ಅಪರಾಧ ಕೃತ್ಯವನ್ನು ಬಹಿರಂಗವಾಗಿ ಬೆಂಬಲಿಸಿದ ಎಲ್ಲರ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರಿನ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ಸಂಘ-ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಒತ್ತಾಯಿಸಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ನಮ್ಮ ಪ್ರಜ್ಞಾವಂತ ಸಮಾಜ ಅವಕಾಶ ನೀಡಬಾರದು. ಜಾತಿ ಮತ ಧರ್ಮ ಬೇಧ ಭಾವ ಇಲ್ಲದೆ ಈ ನಿಟ್ಟಿನಲ್ಲಿ ಎಲ್ಲರೂ ಪೊಲೀಸರನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೀನುಗಾರರು ಶ್ರಮ ಜೀವಿಗಳು. ಸತ್ಯ, ನ್ಯಾಯ, ಧರ್ಮದಲ್ಲಿ, ಸೌಹಾರ್ದತೆಯಲ್ಲಿ ನಂಬಿಕೆವುಳ್ಳವರು. ಅವರ ಒಳ್ಳೆತನವನ್ನು, ಸಂಘಟಿತ ಶಕ್ತಿಯನ್ನು ಸಂವಿಧಾನ ಪ್ರತಿಪಾದಿಸುವ ಜೀವನ ಮೌಲ್ಯಗಳ ಆಧಾರದಲ್ಲಿ, ಸಮಾಜವನ್ನು ಪರಿವರ್ತಿಸಲು ಬಳಸಿಕೊಳ್ಳಬೇಕೇ ಹೊರತು, ಕಾನೂನು ಉಲ್ಲಂಘನೆಯನ್ನು, ಹೇಯ ಕೃತ್ಯಗಳನ್ನು ಸಮರ್ಥಿಸಿ ಕೊಳ್ಳಲು ಅಲ್ಲ. ಇದನ್ನು ಯಾರೂ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಬಾರದು ಎಂದು ಮಹಾ ಒಕ್ಕೂಟದ ಪರವಾಗಿ ಅವರು ಮನವಿ ಮಾಡಿದರು.

ಈ ಪ್ರಕರಣದಲ್ಲಿ ಪೊಲೀಸರು ಕರ್ತವ್ಯ ಲೋಪ ಎಸಗಿದ್ದರೆ ಅವರ ವಿರುದ್ಧವೂ ಕ್ರಮಕೈಗೊಳ್ಳಲು ಅವಕಾಶವಿದ್ದೇ ಇದೆ. ಆದ್ದರಿಂದ ಯಾರೂ ಸಂಘಟಿತ ಶ್ರಮಜೀವಿ ಜನವರ್ಗವನ್ನು ಕಾನೂನು ಉಲ್ಲಂಘಿಸಲು ಪ್ರೇರೇಪಿಸಬಾರದು ಎಂದರು.

ದೌರ್ಜನ್ಯ ಸಂತ್ರಸ್ತೆ ಮತ್ತು ಅವರ ಕುಟುಂಬಕ್ಕೆ ಪೊಲೀಸರು ಸೂಕ್ತ ಭದ್ರತೆ ಕಲ್ಪಿಸಬೇಕು, ಸಂತ್ರಸ್ಥೆಗೆ ತುರ್ತು ಪರಿಹಾರ ಬಿಡುಗಡೆ ಮಾಡಬೇಕು ಮತ್ತು ಅವರ ಕುಟುಂಬಕ್ಕೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು ಎಂದು ಅವರು ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಆಗ್ರಹಿಸಿದರು.

ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರು ಕೆಲಸದ ವೇಳೆ ಸ್ವಲ್ಪ ಮೀನು ಕದ್ದರು ಎಂಬ ಕ್ಷುಲ್ಲಕ ಆರೋಪದಲ್ಲಿ ಅಮಾನವೀಯವಾಗಿ ಮರಕ್ಕೆ ಕಟ್ಟಿಹಾಕಿ, ಥಳಿಸಿರುವುದು ಗಂಭೀರ ಅಪರಾಧ ಕೃತ್ಯ. ಈ ಅಪರಾಧ ಕೃತ್ಯವನ್ನು ಬಹಿರಂಗ ವಾಗಿ ಸಮರ್ಥಿಸಿದ ವಿಡಿಯೋ ನೋಡಿದಾಗ ಅತೀವ ನೋವು - ಸಂಕಟ ವಾಗು ತ್ತದೆ. ಮಾನವೀಯತೆ ಮೇಲೆ ನಂಬಿಕೆ ಇರುವ ಯಾರಿಗೇ ಆಗಲಿ, ಬುದ್ಧಿವಂತರ ಜಿಲ್ಲೆ ಎಂಬ ಖ್ಯಾತಿಗೆ ಒಳಗಾದ ಈ ಜಿಲ್ಲೆ ಎತ್ತ ಸಾಗುತ್ತಿದೆ ಎಂಬ ಆತಂಕ ಸಹಜವಾಗಿ ಮೂಡುತ್ತದೆ ಎಂದು ಲೋಲಾಕ್ಷ ನುಡಿದರು.

ಆ ಬಳಿಕ ಮಲ್ಪೆ ಬಂದರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಲವರು ಬಳಸಿದ ಭಾಷೆ ಯಿಂದ ಮತ್ತು ಮಾನವೀಯತೆಯುಳ್ಳ ಪ್ರತಿಯೊಬ್ಬನೂ ತಲೆ ತಗ್ಗಿಸುವಂತೆ ಮಾಡಿದೆ. ಈ ಹೇಯ ಕೃತ್ಯ ವನ್ನು ಸಮರ್ಥಿಸಿದ ರೀತಿ, ಪರಿಶಿಷ್ಟರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿ ಯಲ್ಲಿ ಹಾಕಿದ ಕೇಸು ವಾಪಸು ಪಡೆಯಬೇಕೆಂದು ನೀಡಿದ ಎಚ್ಚರಿಕೆಯಿಂದ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಗಳ ಜನರಲ್ಲಿ ಒಂದು ರೀತಿಯಲ್ಲಿ ಅವ್ಯಕ್ತ ಆತಂಕವುಂಟಾಗಿದೆ ಎಂದವರು ಆತಂಕ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ, ದಲಿತ ಮಹಿಳೆಯನ್ನು ಸಾರ್ವಜನಿಕವಾಗಿ ಅವಮಾನ ಮಾಡಿ ದೌರ್ಜನ್ಯ ನಡೆಸಿರುವ ಮತ್ತು ಆ ದೌರ್ಜನ್ಯವನ್ನು ಬೆಂಬಲಿಸಿರುವ ಹಾಗೂ ಸಮರ್ಥಿಸಿರುವ ಎಲ್ಲರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿ, ಕಾನೂನಿನ ಮಾನ ಕಾಪಾಡಲೇಬೇಕು ಎಂದು ಒಕ್ಕೂಟವು ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸರನ್ನು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತದೆ ಎಂದವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ, ಸಂಚಾಲಕ ಸದಾಶಿವ ಸಾಲಿಯಾನ್, ಸರೋಜಿನಿ ಬಂಟ್ವಾಳ, ರಘು ಎಕ್ಕಾರು, ಕೃಷ್ಣ ಮೂಡುಬೆಳ್ಳೆ, ಮಾಧವ ಕಾವೂರು ಹಾಗೂ ಪದ್ಮನಾಭ ಅವರು ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News