ಲಂಚ ಸ್ವೀಕಾರ | ಉಡುಪಿ ಸಹಾಯಕ ಸರಕಾರಿ ಅಭಿಯೋಜಕ ಲೋಕಾಯುಕ್ತ ಬಲೆಗೆ

ಉಡುಪಿ: ಆಕ್ಷೇಪಣೆ ಸಲ್ಲಿಕೆ ಸಂಬಂಧ ಲಂಚ ಸ್ವೀಕರಿಸುತ್ತಿದ್ದ ಆರೋಪದಲ್ಲಿ ಉಡುಪಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಗಣಪತಿ ವಸಂತ ನಾಯ್ಕ್ ಎಂಬವರನ್ನು ಲೋಕಾಯುಕ್ತ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮರಳು ವಾಹನಕ್ಕೆ ಬಿಡುಗಡೆಗೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸಲು ಗಣಪತಿ ವಸಂತ ನಾಯ್ಕ್ 3ಸಾವಿರ ರೂ. ಲಂಚದ ಬೇಡಿಕೆಯನ್ನು ಇಟ್ಟಿದ್ದರು ಎನ್ನಲಾಗಿದೆ. ಲಂಚ ನೀಡಲು ಒಪ್ಪದ ದೂರುದಾರ ಈ ಕುರಿತು ಉಡುಪಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಅದರಂತೆ ಇಂದು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಉಡುಪಿ ನ್ಯಾಯಾಲಯದಲ್ಲಿರುವ ಕಚೇರಿಯಲ್ಲಿ 2ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಗಣಪತಿ ನಾಯ್ಕ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಮಂಗಳೂರು ಪ್ರಭಾರ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಪ್ರಭಾರ ಡಿವೈಎಸ್ಪಿ ಮಂಜುನಾಥ್, ಪೊಲೀಸ್ ನಿರೀಕ್ಷಕ ರಾಜೇಂದ್ರ ನಾಯಕ್ ಎಂ.ಎನ್., ಎಎಸ್ಸೈ ನಾಗೇಶ್, ಸಿಬ್ಬಂದಿ ನಾಗರಾಜ್, ಸತೀಶ್ ಹಂದಾಡಿ, ರೋಹಿತ್, ಮಲ್ಲಿಕಾ, ಪುಷ್ಪಾವತಿ, ರವೀಂದ್ರ, ರಮೇಶ್, ಅಬ್ದುಲ್ ಜಲಾಲ್, ಪ್ರಸನ್ನ, ರಾಘವೇಂದ್ರ ಹೊಸಕೋಟೆ, ಸುಧೀರ್, ಸತೀಶ್ ಆಚಾರ್ಯ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.