ದಾಂಡೇಲಿ ನದಿಗೆ ಇಳಿದು ವಿದ್ಯುತ್‌ ಲೈನ್ ದುರಸ್ತಿ

Update: 2025-03-29 14:27 IST
ದಾಂಡೇಲಿ ನದಿಗೆ ಇಳಿದು ವಿದ್ಯುತ್‌ ಲೈನ್ ದುರಸ್ತಿ
  • whatsapp icon

ಕಾರವಾರ: ಮುಂಗಾರು ಪೂರ್ವ ಭಾರೀ ಗಾಳಿ, ಮಳೆಯಿಂದ ತುಂಡಾಗಿ ಕಾಳಿ ನದಿ ನೀರಿಗೆ ಬಿದ್ದಿದ್ದ 11 ಕೆ.ವಿ. ಪ್ರಾಜೆಕ್ಟ್ 1 ಮತ್ತು 2 ಹಾಗೂ ಕಾಳಿ ಮಾರ್ಗದ ವಿದ್ಯುತ್‌ ಲೈನ್‌ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ವಿದ್ಯುತ್‌ ಸರಬರಾಜು ಪುನಾರಂಭಗೊಂಡಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌ ದೀಪಕ್‌ ಎನ್‌. ನಾಯಕ ತಿಳಿಸಿದ್ದಾರೆ.

ಮಾ. 25 ರಂದು ಸುರಿದ ಗಾಳಿ-ಮಳೆಗೆ ಕಾಳಿ ನದಿಯ ಕ್ರಾಸಿಂಗ್‌ ಲೈನ್‌ ಮೇಲೆ ಬೃಹತ್‌ ಗಾತ್ರದ ಮಾವಿನ ಮರ ಬಿದ್ದು ವಿದ್ಯುತ್‌ ಲೈನ್‌ ತುಂಡಾಗಿ, ನದಿ ನೀರಿನಲ್ಲಿ ಬಿದ್ದಿತ್ತು. ಇದರಿಂದ ಬೊಮ್ಮನಳ್ಳಿ, ಕೇದಾಳ, ಕುಳಗಿ ಹಾಗೂ ಅಂಬಿಕಾನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್‌ ಪುರುಷೋತ್ತಮ ಡಿ. ಮಲ್ಯಾ ಅವರ ಮಾರ್ಗದರ್ಶನ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ದೀಪಕ್‌ ಎನ್. ನಾಯಕ್‌‌ ಅವರ ಮೇಲ್ವಿಚಾರಣೆ, ಶಾಖಾಧಿಕಾರಿ (ನಗರ) ಉದಯಕುಮಾರ್‌ ಎಚ್‌., ಶಾಖಾಧಿಕಾರಿ (ಗ್ರಾಮೀಣ ) ರಾಹುಲ್‌ ಭೂತೆ ಇವರ ನೇತೃತ್ವದಲ್ಲಿ ಗುತ್ತಿಗೇದಾರ ಖುಷಿ ಇಲೆಕ್ಟ್ರಿಕಲ್‌ನ ಸಿಬ್ಬಂದಿ , ದಾಂಡೇಲಿ ಉಪ-ವಿಭಾಗದ ನಗರ ಹಾಗೂ ಗ್ರಾಮೀಣ ಶಾಖೆಯ ಸಿಬ್ಬಂದಿ, ಕೆಪಿಟಿಸಿಎಲ್‌ ಸಿಬ್ಬಂದಿ ನಿರಂತರವಾಗಿ ಎರಡು ದಿನಗಳ ವರೆಗೆ ನದಿ ನೀರಿನ ನಡುವೆ ದುರಸ್ತಿ ಕಾರ್ಯ ಕೈಗೊಂಡು, ಮಾ. 27ರ ಸಂಜೆ 7.30ಕ್ಕೆ ವಿದ್ಯುತ್‌ ಪೂರೈಕೆ ಮರುಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದುರಸ್ತಿ ಕಾರ್ಯಕ್ಕೆ ರೀವರ್‌ ರ್ಯಾಪ್ಟಿಂಗ್ ಬೋಟ್‌ ನೀಡಿದ ಸಂತೋಷ ಹೋಟೆಲ್ ಮಾಲೀಕ ವಿಷ್ಣುಮೂರ್ತಿ ರಾವ್ , ಬೋಟ್‌ ಚಾಲಕ ಉದೇಶ್‌, ಹೆಸ್ಕಾಂ ಹಾಗೂ ಕೆಪಿಟಿಸಿಎಲ್‌ ಸಿಬ್ಬಂದಿಗೆ ಹೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಇಂಜಿನೀಯರ್‌ ದೀಪಕ್‌ ಎನ್‌. ನಾಯಕ ಅವರು ಧನ್ಯವಾದ ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News