ಸಿದ್ಧಾಪುರದಲ್ಲಿ ಲಿಂಗಮುದ್ರೆ ಕಲ್ಲು ಪತ್ತೆ

ಕುಂದಾಪುರ, ಎ.1: ಸಿದ್ದಾಪುರ-ಹೊಸಂಗಡಿ ರೋಟರಿ ಕ್ಲಬ್‌ನ ಸಣ್ಣಯ್ಯ ಯಡಿಯಾಳ ಸಭಾಭವನದ ಮುಂಭಾಗದ ಅರವಿಂದ ಶೆಟ್ಟಿ ಅವರ ಜಾಗದಲ್ಲಿ ಲಿಂಗಮುದ್ರೆ ಕಲ್ಲು ಪತ್ತೆಯಾಗಿದೆ.
ಸಿದ್ಧಾಪುರದ ವಾಸುಕಿ ಕ್ಲಿನಿಕ್‌ನ ಡಾ.ಜಗದೀಶ್ ಶೆಟ್ಟಿ ಅವರಿಂದ ಮಾಹಿತಿ ಯನ್ನು ಪಡೆದುಕೊಂಡಿದ್ದ ತುಮಕೂರು ವಿಶ್ವ ವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ವೈಶಾಲಿ ಜಿ.ಆರ್. ಸಿದ್ದಾಪುರ, ಸ್ಥಳಕ್ಕೆ ತೆರಳಿ, ರೋಟರಿ ಮಾಜಿ ಅಧ್ಯಕ್ಷ ಡಿ.ನಾಗೇಂದ್ರ ಯಡಿಯಾಳ, ಶಿಕ್ಷಕಿ ಕೃಷ್ಣವೇಣಿ ಹಾಗೂ ಉದ್ಯಮಿ ಗಣೇಶ್ ಶೆಟ್ಟಿ ಸಹಕಾರದಿಂದ ಮುಳ್ಳು ಗಿಡಗಳಿಂದ ಆವರಿಸಿದ್ದ ಈ ಕಲ್ಲನ್ನು ಸ್ವಚ್ಛಗೊ ಳಿಸಿ ಕಲ್ಲನ್ನು ಪರೀಕ್ಷಿಸಿದ್ದರು.
ಈ ವೇಳೆ ಕಲ್ಲಿನ ಮೇಲ್ಭಾಗದಲ್ಲಿ ಸೂರ್ಯ ಚಂದ್ರ ಹಾಗೂ ಅದರ ಕೆಳಭಾಗದಲ್ಲಿ ಶಿವಲಿಂಗದ ಕೆತ್ತನೆ ಇರುವುದು ಕಂಡು ಬಂದಿದೆ. ಸುಮಾರು ಎರಡುವರೆ ಅಡಿ ಎತ್ತರವಿರುವ ಕಲ್ಲು, ಒಂದು ಅಡಿ ಅಗಲವಿದೆ. ಅಂದಾಜು ಎರಡು ಅಡಿ ಕೆಳಕ್ಕೆ ಆಳವಿರಬಹುದು ಎಂದು ಅಂದಾಜಿಸಲಾಗಿದೆ.
ಶಾಸನ ತಜ್ಞರಾದ ತುಮಕೂರು ವಿಶ್ವ ವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಅಧ್ಯಕ್ಷ ಪ್ರೊ.ಎಂ.ಕೊಟ್ರೇಶ್ ಅವರಿಗೆ ಈ ಮಾಹಿತಿ ನೀಡಿದ್ದು, ಅದನ್ನು ಪರಿಶೀಲನೆ ಮಾಡಿದ ಅವರು, ಈ ಕಲ್ಲಿನಲ್ಲಿ ಯಾವುದೇ ಬರವಣಿಗೆ ಕಂಡುಬಂದಿಲ್ಲ. ತಮ್ಮ ಗಡಿಗಳನ್ನು ಗುರುತಿಸಲು ಶೈವರು ಲಿಂಗ ಮುದ್ರೆ ಕಲ್ಲನ್ನು, ವೈಷ್ಣವರು ವಾಮನ ಮುದ್ರೆ ಕಲ್ಲನ್ನು ಹಾಗೂ ಜೈನರು ಮುಕ್ಕೊಡೆ ಕಲ್ಲುಗಳನ್ನು ಹಾಕಿಸುತ್ತಿದ್ದರು. ಇಲ್ಲಿ ದೊರೆತಿರುವ ಕಲ್ಲು ಲಿಂಗ ಮುದ್ರೆ ಕಲ್ಲಾಗಿದೆ ಎಂದು ತಿಳಿಸಿದ್ದಾರೆ.