ಮಣಿಪಾಲ| ನಿಲ್ದಾಣದಲ್ಲೇ ಹೊಡೆದಾಟ: ಇಬ್ಬರು ಬಸ್ ಸಿಬ್ಬಂದಿಗಳ ಬಂಧನ

ಉಡುಪಿ, ಎ.3: ಮಣಿಪಾಲದ ಟೈಗರ್ ಸರ್ಕಲ್ ಬಳಿ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ಟೈಮಿಂಗ್‌ಗೆ ಸಂಬಂಧಿಸಿದಂತೆ ಹೊಡೆದಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಸ್‌ಗಳ ಸಿಬ್ಬಂದಿಗಳಾದ ಚಾಲಕ ಹಾಗೂ ನಿರ್ವಾಹಕನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಬುಧವಾರ ಸಂಜೆ 4:30ರ ಸುಮಾರಿಗೆ ಮಣಿಪಾಲದ ಟೈಗರ್ ಸರ್ಕಲ್ ಬಳಿ ಇರುವ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿತ್ತು. ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುವ ಟೈಮಿಂಗ್ ವಿಚಾರದಲ್ಲಿ ಇವರು ಸಾರ್ವಜನಿಕ ವಾಗಿ ಹೊಡೆದಾಡಿಕೊಂಡಿದ್ದರು.
ಆನಂದ್ ಬಸ್‌ನ ಕಂಡಕ್ಟರ್ ವಿಜಯ ಕುಮಾರ್ (25) ಹಾಗೂ ಮಂಜುನಾಥ ಬಸ್ಸಿನ ಚಾಲಕ ಉಚ್ಚಿಲದ ಆಲ್ಪಾಝ್ (25) ನಡುವೆ ಗಲಾಟೆ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದವು.
ಪ್ರಕರಣಗಳ ಬಗ್ಗೆ ತನಿಖೆ ಕೈಗೊಂಡ ಮಣಿಪಾಲ ಪೊಲೀಸರು ಪ್ರಕರಣದ ಆರೋಪಿಗಳಾದ ಮಂಜುನಾಥ ಬಸ್ಸಿನ ಚಾಲಕ ಉಚ್ಚಿಲದ ಆಲ್ಪಾಝ್ (25) ಹಾಗೂ ಆನಂದ ಬಸ್ಸಿನ ಕಂಡೆಕ್ಟರ್ ಚಿತ್ರದುರ್ಗದ ವಿಜಯಕುಮಾರ್(25)ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಲಯ ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಎರಡೂ ಬಸ್‌ಗಳನ್ನು ಜಪ್ತಿ ಮಾಡಲಾಗಿದ್ದು, ಮಣಿಪಾಲ ಪೊಲೀಸರು ಮುಂದಿನ ತನಿಖೆ ನಡೆಸುತಿದ್ದಾರೆ.