ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಎನ್‌ಎಸ್‌ಯುಐ ಹೋರಾಟ: ಅನ್ವಿತ್ ಕಟೀಲ್

ಉಡುಪಿ, ಎ.3: ರಾಜ್ಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸಲು ಹಾಗೂ ಅವರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಒದಗಿಸಲು ಎನ್‌ಎಸ್‌ಯುಐ ತಂಡವೊಂದು ರಾಜ್ಯದಲ್ಲಿ ‘ವಿದ್ಯಾರ್ಥಿ ನ್ಯಾಯ ಯಾತ್ರೆ’ಯನ್ನು ಕೈಗೊಂಡಿದೆ ಎಂದು ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ವಿತ್ ಕಟೀಲ್ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಡ ಈಗಾಗಲೇ ಎಂಟು ಜಿಲ್ಲೆಗಳ ಪ್ರವಾಸವನ್ನು ಮುಗಿಸಿ, ನಿನ್ನೆ ದಕ್ಷಿಣ ಕನ್ನಡದ ಬಳಿಕ ಇಂದು ಉಡುಪಿ ಜಿಲ್ಲೆಗೆ ಆಗಮಿಸಿದೆ ಎಂದರು.
ನಮ್ಮ ತಂಡ ಜಿಲ್ಲೆಯ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾದ್ಯಾಪಕರು, ಸಿಬ್ಬಂದಿಗಳನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಅರಿತುಕೊಳ್ಳುವ ಪ್ರಯತ್ನ ನಡೆಸಿದೆ. ವಿಶ್ವವಿದ್ಯಾಲಯಗಳಲ್ಲೂ ಕುಲಪತಿಗಳು, ಕುಲಸಚಿವರು, ಪರೀಕ್ಷಾಂಗ ಆಯುಕ್ತರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇವೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅಲ್ಲಿನ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ತ್ವರಿತ ಕ್ರಮಕ್ಕೆ ಒತ್ತಾಯಿಸುತಿದ್ದೇವೆ ಎಂದರು.
ಮಾ.17ರಂದು ಪ್ರಾರಂಭಗೊಂಡ ವಿದ್ಯಾರ್ಥಿ ನ್ಯಾಯಯಾತ್ರೆ ಎ.17ರಂದು ಕೊನೆಗೊಳ್ಳಲಿದೆ. ಈ ವೇಳೆ ರಾಜ್ಯದ ಎಲ್ಲಾ ವಿವಿಗಳನ್ನೂ ನಾವು ಭೇಟಿ ಮಾಡಿ ವಿದ್ಯಾರ್ಥಿಗಳ ಸಮಸ್ಯೆ ಅರಿತುಕೊಳ್ಳಲಿದ್ದೇವೆ. ಕೊನೆಯಲ್ಲಿ ಇವುಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ವರದಿ ರೂಪದಲ್ಲಿ ತರಲಾಗುವುದು ಎಂದು ಅನ್ವಿತ್ ಕಟೀಲ್ ತಿಳಿಸಿದರು.
ನ್ಯಾಯಯಾತ್ರೆ ಸಂದರ್ಭದಲ್ಲಿ ಚರ್ಚೆಗೆ ಬಂದ ವಿಷಯಗಳಲ್ಲಿ ಪದವಿ ತರಗತಿಗಳಲ್ಲಿ ಈಗಿರುವ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ, ಸಮರ್ಪಕ ವಿದ್ಯಾರ್ಥಿ ವೇತನ ವಿತರಣಾ ವ್ಯವಸ್ಥೆ, ಹಾಸ್ಟೆಲ್ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ, ವೃತ್ತಿ ಮಾರ್ಗದರ್ಶನ ಹಾಗೂ ಉದ್ಯೋಗಾವಕಾಶಗಳ ಹೆಚ್ಚಳ, ಮಾದಕ ವಸ್ತು ಹಾಗೂ ರ್ಯಾಗಿಂಗ್ ಪಿಡುಗಿನ ನಿವಾರಣೆ, ವಿದ್ಯಾರ್ಥಿನಿಯರ ಸುರಕ್ಷತೆ, ಸರಕಾರಿ ಕಾಲೇಜು ಹಾಗೂ ವಿದ್ಯಾಸಂಸ್ಥೆಗಳ ಸಬಲೀಕರಣ ಸೇರಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎನ್‌ಎಸ್‌ಯುಐ ಉಡುಪಿ ಜಿಲ್ಲಾ ಅಧ್ಯಕ್ಷ ಸೌರಭ ಬಲ್ಲಾಳ್, ಉಪಾಧ್ಯಕ್ಷ ಶರತ್ ಕುಂದರ್, ಸೃಜನ್ ಶೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮನೀಶ್ ರಾಜ್, ಅನಿಶ್ ಪೂಜಾರಿ, ಸೈಯದ್ ಉಪಸ್ಥಿತರಿದ್ದರು.