ಕೊರಗ ಬಾಂಧವರ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ

ಕುಂದಾಪುರ, ಎ.6: ಕ್ರೀಡೆಗಳ ಆಯೋಜನೆಯಿಂದ ಸಂಘಟನೆ ಬೆಳೆಯವುದ ರೊಂದಿಗೆ ಸಮಾಜವು ಒಗ್ಗೂಡುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗೀಧಾರಿಕೆಯೇ ಮುಖ್ಯವಾಗಬೇಕು. ಸಮಾಜದ ಹಿರಿಯರ ಹೋರಾಟದ ಫಲವಾಗಿ ಇಂದು ಕೊರಗ ಸಮುದಾಯ ಬೆಳವಣಿಗೆಯ ಬೆಳಕನ್ನು ಸಮಾಜದಲ್ಲಿ ಕಾಣುವಂತಾಗಿದೆ ಎಂದು ಉಡುಪಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ ಶೆಟ್ಟಿ ಹೇಳಿದ್ದಾರೆ.
ಕುಂಭಾಸಿಯ ಮಕ್ಕಳ ಮನೆ ವಠಾರದ ಮೈದಾನದಲ್ಲಿ ಲಕ್ಕಿ ಫ್ರೆಂಡ್ಸ್ ಕೋಟ ಇವರ ಆಶ್ರಯದಲ್ಲಿ ಮಕ್ಕಳ ಮನೆ ಕುಂಭಾಸಿ ಸಹಭಾಗಿತ್ವದಲ್ಲಿ ಕೊರಗ ಸಮುದಾಯ ಬಾಂಧವರಿಗಾಗಿ ರವಿವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆಯನ್ನು ಕುಂಭಾಸಿ ಗ್ರಾಪಂ ಅಧ್ಯಕ್ಷೆ ಆನಂದ ಪೂಜಾರಿ ವಹಿಸಿದ್ದರು. ತಾಲ್ಲೂಕು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಗುತ್ತಿಗೆದಾರ ಅರ್ಜುನ್‌ದಾಸ್, ಗ್ರಾಪಂ ಮಾಜಿ ಸದಸ್ಯೆ ಸಾಲು, ಸಮಾಜದ ಮುಖಂಡರಾದ ಸುಬ್ರಾಯ ಮಾಜಾಲಿ, ಗಣೇಶ್ ಬಾರ್ಕೂರು, ಲಕ್ಷ್ಮಣ ಮರವಂತೆ, ಶೇಖರ ಮರವಂತೆ ಮೊದಲಾದವರು ಉಪಸ್ಥಿತರಿದ್ದರು.
ಮಕ್ಕಳ ಮನೆ ಮುಖ್ಯಸ್ಥ ಗಣೇಶ್ ವಿ ಕುಂದಾಪುರ ಸ್ವಾಗತಿಸಿದರು. ಶಿಕ್ಷಕಿ ವಿನುತಾ ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು, ಅಶ್ವಿನಿ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟದಲ್ಲಿ ಉಡುಪಿ, ಕಾಸರಗೋಡು, ದಕ್ಷಿಣ ಕನ್ನಡ ಸಹಿತ ವಿವಿಧ ಜಿಲ್ಲೆಗಳ ಒಟ್ಟು 26 ತಂಡಗಳು ಭಾಗವಹಿಸಿದ್ದವು.