ಉಡುಪಿ ಜಿಲ್ಲಾಸ್ಪತ್ರೆ ನೂತನ ಕಟ್ಟಡ ಕಾಮಗಾರಿ ಸ್ಥಗಿತ!

ಉಡುಪಿ, ಎ.6: ಕಳೆದ ಡಿಸೆಂಬರ್ ತಿಂಗಳಲ್ಲಿಯೇ ಪೂರ್ಣಗೊಂಡು ಉದ್ಘಾಟನೆಗೊಳ್ಳಬೇಕಾಗಿದ್ದ ಉಡುಪಿ ಜಿಲ್ಲಾಸ್ಪತ್ರೆ ನೂತನ ಕಟ್ಟಡಕ್ಕೆ ಹೆಚ್ಚುವರಿ ಅನುದಾನದ ಅಗತ್ಯ ಇದೆ. ಈ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇನ್ನೂ ಹೆಚ್ಚುವರಿ ಅನುದಾನ ಬಿಡುಗಡೆಯಾಗಿಲ್ಲ. ಈ ಕಾರಣದಿಂದ ಸದ್ಯ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ.
ಶಿಲಾನ್ಯಾಸ ನೆರವೇರಿಸಿ ಮೂರುವರೆ ವರ್ಷಗಳು ಕಳೆದರೂ ಕಟ್ಟಡ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲ. ಎಸ್‌ಟಿಪಿ ನಿರ್ಮಾಣ, ಆಪರೇಶನ್ ಥಿಯೇಟರ್ ಇಂಟಿರೀಯರ್, ರಸ್ತೆ ಸೇರಿದಂತೆ ಸುಮಾರು 6.5 ಕೋಟಿ ರೂ. ವೆಚ್ಚದ ಬಾಕಿ ಕಾಮಗಾರಿಗಳು ಇನ್ನೂ ಬಾಕಿ ಉಳಿದಿವೆ. ಹಾಗಾಗಿ ಬಾಕಿ ಕಾಮಗಾರಿ ಗಳಿಗೆ ಅನುದಾನ ಬಿಡುಗಡೆ ಮಾಡಲು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಉಡುಪಿ ಜಿಲ್ಲೆ ರಚನೆಯಾಗಿ 25 ವರ್ಷ ಸಂದರೂ ಜಿಲ್ಲೆಗೊಂದು ಸುಸಜ್ಜಿತ ಆಸ್ಪತ್ರೆ ಇರಲಿಲ್ಲ. 135 ಬೆಡ್‌ಗಳಿರುವ ಅಜ್ಜರಕಾಡು ತಾಲೂಕು ಆಸ್ಪತ್ರೆ ಜಿಲ್ಲಾಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿತ್ತು. 2020ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 250 ಬೆಡ್‌ಗಳ ಹೊಸ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ 115 ಕೋಟಿ ರೂ. ಮಂಜೂರುಗೊಳಿಸಿದ್ದರು. 2021, ಆಗಸ್ಟ್‌ನಲ್ಲಿ ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.
ಕಟ್ಟಡಕ್ಕೆ 115 ಕೋಟಿ ರೂ. ಹಾಗೂ ಸಿಬ್ಬಂದಿ, ಪೀಠೋಪಕರಣ, ಅಗತ್ಯ ಮೂಲಸೌಕರ್ಯ ಸೇರಿ ಒಟ್ಟು 150 ಕೋಟಿ ರೂ. ವೆಚ್ಚ ಅಂದಾಜಿಸ ಲಾಗಿದ್ದರೂ ಕಾಮಗಾರಿ ವಿಳಂಬದಿಂದ ಪ್ರಸ್ತಾವಿತ ಕಟ್ಟಡಕ್ಕೆ ಸುಮಾರು 140 ಕೋಟಿ ರೂ. ಖರ್ಚಾಗಿದೆ. ಮೇ ಒಳಗೆ ಟೆಂಡರ್‌ನಲ್ಲಿ ಉಲ್ಲೇಖಿಸಿದ ಸಿವಿಲ್ ಕಾಮಗಾರಿಗಳು ಪೂರ್ಣಗೊಳ್ಳಲಿದೆ.
ಈ ಮಧ್ಯೆ ಕೇಂದ್ರ ಸರಕಾರದ 50 ಬೆಡ್‌ಗಳ ಕ್ರಿಟಿಕಲ್ ಕ್ಯಾರ್ ಸೆಂಟರ್ ಉಡುಪಿಗೆ ಮಂಜೂರಾಗಿದ್ದು, ಹೊಸ ಕಟ್ಟಡದ 2ನೇ ಮಹಡಿಯಲ್ಲಿ ಜಾಗ ನಿಗದಿಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟ ಸುಮಾರು 8.5 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗಾಗಿ ಟೆಂಡರ್ ಕರೆಯಲಾಗಿದ್ದು, ಕೆಲಸ ಪೂರ್ಣ ಗೊಳ್ಳಲು ಕನಿಷ್ಠ 6 ತಿಂಗಳು ಬೇಕಾಗಬಹುದು. ಹೀಗಾಗಿ ಹೊಸ ಆಸ್ಪತ್ರೆಯು ಈ ವರ್ಷಾಂತ್ಯಕ್ಕೆ ಜನರ ಸೇವೆಗೆ ತೆರೆದುಕೊಳ್ಳುವ ಸಾಧ್ಯತೆಗಳಿವೆ.
ಹೊಸ ಆಸ್ಪತ್ರೆಗೆ ವಿವಿಧ ಪರಿಕರಗಳ ಖರೀದಿಗೆ ಸುಮಾರು 16 ಕೋಟಿ ರೂ. ಹಾಗೂ ವೈದ್ಯರು, ದಾದಿಯರು, ಲ್ಯಾಬ್ ಟೆಕ್ನೀಶಿಯನ್ಸ್, ಡಿಗ್ರೂಪ್ ನೌಕರರ ನೇಮಕಾತಿ, ಸಂಬಳ, ಭತ್ಯೆಗಳಿಗಾಗಿ ಸುಮಾರು 17 ಕೋಟಿ ರೂ. ಸೇರಿದಂತೆ 33 ಕೋಟಿ ರೂ. ಅನುದಾನ ಬಿಡುಗಡೆಗೆ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ಅಶೋಕ್ ಕುಮಾರ್ ತಿಳಿಸಿದ್ದಾರೆ.
ಜೊತೆಗೆ ಮುಖ್ಯ ಟೆಂಡರ್ ಹೊರತಾದ ಅಗತ್ಯ ಕಾಮಗಾರಿಗಳಿಗೆ 6.5 ಕೋಟಿ ರೂ. ಸೇರಿ ಆಸ್ಪತ್ರೆ ಕಾರ್ಯಾರಂಭ ಮಾಡಲು ಇನ್ನೂ 40 ಕೋಟಿ ರೂ. ಅನುದಾನದ ಅಗತ್ಯವಿದೆ. ರಾಜ್ಯ ಸರಕಾರ ಶೀಘ್ರಗತಿಯಲ್ಲಿ ಅನುದಾನ ಮಂಜೂರು ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.