ಎ.18ರಂದು ಯಕ್ಷಗಾನ ಸಿನೆಮಾ ‘ವೀರಚಂದ್ರಹಾಸ’ ಬಿಡುಗಡೆ: ರವಿ ಬಸ್ರೂರು

Update: 2025-04-06 20:57 IST
ಎ.18ರಂದು ಯಕ್ಷಗಾನ ಸಿನೆಮಾ ‘ವೀರಚಂದ್ರಹಾಸ’ ಬಿಡುಗಡೆ: ರವಿ ಬಸ್ರೂರು
  • whatsapp icon

ಕುಂದಾಪುರ, ಎ.6: ಯಕ್ಷಗಾನವನ್ನು ವಿಸ್ತಾರಗೊಳಿಸುವ ಉದ್ದೇಶದೊಂದಿಗೆ ಪರಿಶ್ರಮ ತಂಡದ ನೇತ್ರತ್ವದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ‘ವೀರ ಚಂದ್ರಹಾಸ’ ಸಿನಿಮಾವನ್ನು ಎ.18ರಂದು ಏಕ ಕಾಲದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಿನಿಮಾದ ನಿರ್ದೇಶಕ, ಸಂಗೀತ ನಿರ್ದೇಶಕ ರವಿ ಬಸ್ರೂರು ತಿಳಿಸಿದ್ದಾರೆ.

ಕುಂಭಾಶಿಯ ಆನೆಗುಡ್ಡೆ ವಿನಾಯಕ ದೇವಸ್ಥಾನದ ವಠಾರದಲ್ಲಿ ರವಿವಾರ ‘ವೀರಚಂದ್ರಹಾಸ’ ಚಲನಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿ ಅವರು ಮಾತನಾಡುತಿದ್ದರು.

ಈ ಚಿತ್ರದಲ್ಲಿ ಬಹುತೇಕ ಪಾತ್ರಗಳನ್ನು ವೃತ್ತಿಪರ ಯಕ್ಷಗಾನ ಕಲಾವಿದರೇ ನಿರ್ವಹಿಸಿದ್ದಾರೆ. ಸುಮಾರು 400ರಿಂದ 500 ಪಾತ್ರಧಾರಿಗಳು ಸಿನಿಮಾದ ದೃಶ್ಯಾವಳಿಗಳಲ್ಲಿ ಅಭಿನಯಿಸಿದ್ದಾರೆ. ಪ್ರಸಿದ್ಧ ಭಾಗವತ ರಾದ ಪಟ್ಲ, ಜನ್ಸಾಲೆ, ಮೊಗೆಬೆಟ್ಟು, ಚಿನ್ಮಯಿ, ಬಿಲ್ಲಾಡಿ ಮುಂತಾದವರು ಹಿನ್ನೆಲೆ ಗಾಯನದಲ್ಲಿ ರಸದೌತಣ ನೀಡಿದ್ದಾರೆ. ವೇಷ ಕಟ್ಟುವವರು ಹಾಗೂ ಬಣ್ಣ ಹಚ್ಚುವವರು ಸೇರಿ ನೂರಾರು ಮಂದಿ ಕಲಾವಿದರು ಹಾಗೂ ತಂತ್ರಜ್ಞರನ್ನು ಬಳಸಿಕೊಳ್ಳಲಾಗಿದೆ ಎಂದರು.

ಯಕ್ಷಗಾನದ ಪಂಜು ಹಾಗೂ ದೊಂದಿಗಳನ್ನೆ ಬಳಸಿ ಪರಂಪರೆಯನ್ನು ಉಳಿಸಿಕೊಳ್ಳಲಾಗಿದೆ. 1600ರಿಂದ 1700ರಷ್ಟು ಟ್ರ್ಯಾಕ್ ಕೇವಲ ಚಂಡೆ- ಮದ್ದಳೆಗಳ ವಾದನದಲ್ಲಿಯೇ ಅದ್ಭುತವಾಗಿ ಕೇಳಿ ಬಂದಿದೆ. ಹಿರಿಯ ನಟ ಡಾ.ಶಿವರಾಜ್ ಕುಮಾರ್, ‘ಶಿವಪುಟ್ಠಸ್ವಾಮಿ’ ಎಂಬ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಕಲಾವಿದರಾದ ಚಂದನ್ ಶೆಟ್ಟಿ, ಗರುಡ ರಾಮ್, ಪುನೀತ್ ರುದ್ರನಾಗ್ ಹಾಗೂ ಪ್ರಣವ್ ಸೂರ್ಯ ಯಕ್ಷಗಾನ ವೇಷಭೂಷಣಗಳೊಂದಿಗೆ ಪಾತ್ರಧಾರಿಗಳಾಗಿ ಅಭಿನಯಿಸಿದ್ದಾರೆ ಎಂದು ಅವರು ಹೇಳಿದರು.

ಅಂದಾಜು 8-9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾಕ್ಕೆ 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. 2.35 ನಿಮಿಷಗಳ ಅವಧಿಯನ್ನು ಹೊಂದಿರುವ ಈ ಚಿತ್ರ, ರಾಜ್ಯದ 60 ಥಿಯೇಟರ್‌ಗಳಲ್ಲಿ ಬಿಡುಗಡೆ ಕುರಿತು ಮಾತುಕತೆ ನಡೆದಿದೆ. ಹೊಂಬಾಳೆ ಫಿಲ್ಮ್ ಸಂಸ್ಥೆಯವರು ಚಿತ್ರದ ಒಟ್ಟಾರೆ ನಿರ್ಮಾಣದಲ್ಲಿ ಸಹಕಾರ ನೀಡಿದ್ದಾರೆ. ಈಗಾಗಲೇ ಸಿನಿಮಾದ ತೆಲುಗು ಅವತರಣಿಕೆಯ ಬಗ್ಗೆ ಬೇಡಿಕೆ ಬಂದಿದ್ದು, ಬೇರೆ ಬೇರೆ ಭಾಷೆಗಳಲ್ಲಿಯೂ ಬೇಡಿಕೆ ಬರುವ ಕುರಿತು ನಿರೀಕ್ಷೆ ಇದೆ ಎಂದರು.

ಈ ಸಂದರ್ಭದಲ್ಲಿ ನಾಯಕ ನಟ ಶಿಥಿಲ್ ಕುಮಾರ ಶೆಟ್ಟಿ, ಅಯೋಜಕರಾದ ನಾಗರಾಜ್ ಶೆಟ್ಟಿ ನೈಕಂಬಳ್ಳಿ, ಕಲಾವಿದರಾದ ನವೀನ್ ಶೆಟ್ಟಿ ಐರ್ಬೈಲ್, ಪ್ರಸನ್ನ ಶೆಟ್ಟಿಗಾರ್, ಭಾಗವತ ಪ್ರಸಾದ್ ಕುಮಾರ ಮೊಗೆಬೆಟ್ಟು ಉಪಸ್ಥಿತರಿದ್ದರು.

‘ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೊಡುವಂತೆ ಕೇಳಲಾಗಿದೆ. ರಾಜ್ಯದ ವಿದ್ಯಾರ್ಥಿಗಳಿಗೆ ಈ ಸಿನಿಮಾ ನೋಡುವ ಅವಕಾಶ ಮಾಡಿಕೊಡುವಂತೆ ವಿನಂತಿಸಲಾಗಿದೆ. ಯಕ್ಷಗಾನ ತರಬೇತಿ ಕೇಂದ್ರ, ಅಧ್ಯಯನ ಕೇಂದ್ರ, ಪಠ್ಯ ಸೇರಿದಂತೆ ಯಕ್ಷಗಾನ ಕ್ಷೇತ್ರದ ಕಲಾವಿದರು ಹಾಗೂ ಕ್ಷೇತ್ರದ ಬೆಳೆವಣಿಗೆಗೆ ಪೂರಕವಾಗಿ ಬೇಡಿಕೆಯ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’

-ರವಿ ಬಸ್ರೂರು, ನಿರ್ದೇಶಕರು

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News