ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ: ಎ.7ರಂದು ತಾಂತ್ರಿಕ ಸಮಿತಿ ಸಭೆ, ಡಿಸಿಗೆ ವರದಿ

ಬ್ರಹ್ಮಾವರ, ಎ.6: ಅಫಘಾತ ವಲಯವೆಂದು ಗುರುತಿಸಲ್ಪಟ್ಟು ಬಹಳಷ್ಟು ಸಾವು-ನೋವಿನ ಮೂಲಕ ಸಾರ್ವಜನಿಕರ ಬೃಹತ್ ಪ್ರತಿಭಟನೆಗೆ ಕಾರಣ ವಾಗಿರುವ ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಲು ಜಿಲ್ಲಾಧಿಕಾರಿಗಳು ರಚಿಸಿರುವ ತಾಂತ್ರಿಕ ಸಮಿತಿ ನಾಳೆ ಬೆಳಗ್ಗೆ ಬ್ರಹ್ಮಾವರ ತಾಲೂಕು ಕಚೇರಿಯಲ್ಲಿ ಸಭೆ ನಡೆಸಲಿದ್ದು, ಚರ್ಚೆಯ ಬಳಿಕ ಸೂಕ್ತ ಸಾಧ್ಯತಾ ವರದಿಯನ್ನು ಸಲ್ಲಿಸಲಿದೆ ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ರುವ ಬ್ರಹ್ಮಾವರದ ತಹಶೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ ತಿಳಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಮಂಗಳೂರಿನ ಯೋಜನಾ ನಿರ್ದೇಶಕರು, ಉಡುಪಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ರಾಷ್ಟ್ರೀಯ ಹೆದ್ದಾರಿ-66ರ ಸಹಾಯಕ ಕಾರ್ಯ ನಿರ್ವಾಹಕ ಇಂಜಿಯರ್ ಸಮಿತಿಯ ಸದಸ್ಯರಾಗಿದ್ದಾರೆ.
ಸಮಿತಿ ಶನಿವಾರ ಸಭೆ ಸೇರಿ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆಕಾಶವಾಣಿ ಸರ್ಕಲ್‌ನಿಂದ ಮಹೇಶ್ ಆಸ್ಪತ್ರೆ, ಎಸ್‌ಎಂಎಸ್ ವಿದ್ಯಾಸಂಸ್ಥೆ ಗಳವರೆಗೆ ಪ್ಲೈಓವರ್ ಅಥವಾ ಅಂಡರ್ ಪಾಸ್ ನಿರ್ಮಿಸುವ ಕುರಿತು ತಾಂತ್ರಿಕ ಸಮಿತಿ ಸೂಕ್ತ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಕೂಡಲೇ ನೀಡುವಂತೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದ್ದರು ಎಂದು ಶ್ರೀಕಾಂತ್ ಹೆಗ್ಡೆ ತಿಳಿಸಿದ್ದಾರೆ.
ಆದರೆ ಸಮಿತಿಯ ಪ್ರಮುಖ ಸದಸ್ಯರಾದ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ತುರ್ತು ಕಾರ್ಯದಿಂದಾಗಿ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ, ಸಭೆಯನ್ನು ಸೋಮವಾರ ಬೆಳಗ್ಗೆ 11:30ಕ್ಕೆ ಮುಂದೂಡಲಾಗಿದೆ. ಸಮಿತಿಯ ಉಳಿದ ಸದಸ್ಯರು ಶನಿವಾರವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಈ ಬಗ್ಗೆ ವಿವರವಾಗಿ ಚರ್ಚಿಸಿ ವರದಿಯನ್ನು ಸಿದ್ಧಪಡಿಸಿ ಸಂಜೆಯೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಎಪ್ರಿಲ್ 8ರಂದು ಜಿಲ್ಲಾಧಿಕಾರಿಗಳು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತೊಂದು ಸಭೆ ಕರೆದಿದ್ದು, ಅದರಲ್ಲಿ ಸಮಿತಿಯ ವರದಿ ಬಗ್ಗೆ ಚರ್ಚಿಸಿ ಅಂತಿಮ ಪ್ರಸ್ತಾವನೆಯನ್ನು ಸಂಬಂಧಿತ ಪ್ರಾಧಿಕಾರಕ್ಕೆ ಹಾಗೂ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಹೆಗ್ಡೆ ವಿವರಿಸಿದರು.
ಮಹೇಶ್ ಆಸ್ಪತ್ರೆಯಿಂದ ಎಸ್‌ಎಂಎಸ್‌ವರೆಗೆ (ದೂಪದಕಟ್ಟೆ) ಸರ್ವಿಸ್ ರಸ್ತೆ ನಿರ್ಮಿಸುವ ಕುರಿತೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಶ್ರೀಕಾಂತ್ ಹೆಗ್ಡೆ ತಿಳಿಸಿದರು.