ಸಮಾಜದ ಪ್ರೋತ್ಸಾಹ ಇದ್ದರೆ ಸಾಧನೆ ಮಾಡಲು ಸಾಧ್ಯ: ವೀರಪ್ಪ ಮೊಯ್ಲಿ

ಉಡುಪಿ, ಎ.6: ಒಬ್ಬರ ಯಶಸ್ಸಿನ ಹಿಂದೆ ಸಮಾಜದ ಬೆಂಬಲ ಅತೀ ಅಗತ್ಯವಾಗಿದೆ. ಯಶಸ್ಸಿಗೆ ಸಮಾಜದವರ, ಹೊರಗಿನವರ ಸಹಕಾರ ಪ್ರೋತ್ಸಾಹ ಇದ್ದರೆ ಸಾಧನೆ ಮಾಡಲು ಸಾಧ್ಯ. ನಮ್ಮ ಸಮಾಜದಲ್ಲಿನ ಸರಸ್ವತಿಯನ್ನು ಉಳಿಸಬೇಕಾದದು ನಮ್ಮ ಮುಂದಿನ ಜನಾಂಗದ ಕಾರ್ಯವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಡಾ.ವೀರಪ್ಪಮೊಯಿಲಿ ಹೇಳಿದ್ದಾರೆ.
ದೇವಾಡಿಗ ಸಂಘ ಮುಂಬಯಿಯು ಶತಮಾನೋತ್ಸವ ಅಂಗವಾಗಿ ್ಠನವಿ ಮುಂಬಯಿಯ ನೆರುಲ್‌ನ ದೇವಾಡಿಗ ಭವನದಲ್ಲಿ ಹಮ್ಮಿಕೊಳ್ಳಲಾದ ಸಮಾಜದ ಸಾಧಕರಿಗೆ ಹಾಗೂ ಗಣ್ಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪರಂಪರೆಗೆ ಇತಿಹಾಸವಿದೆ. ಯಾವುದೇ ಕಾರ್ಯಕ್ರಮಕ್ಕೆ ಮಂಗಳ ವಾದ್ಯ ನಡೆಯಬೇಕಿದ್ದರೆ ಅದು ದೇವಾಡಿಗ ಸಮಾಜ ದವರಿಂದ ಮಾತ್ರವಾಗಿದೆ. ಸ್ವಾತಂತ್ರ ಪೂರ್ವದ ಕಾಲದಲ್ಲಿ ನಮ್ಮ ಹಿರಿಯರು ಬಹಳ ಕಷ್ಟದ ದಿನಗಳಲ್ಲಿ ಸಮಾಜಕ್ಕೆ ಶಕ್ತಿ ತುಂಬ ಉದ್ದೇಶದಿಂದ ಸಂಘ ಸ್ಥಾಪಿಸಿದರು. ಇನ್ನಷ್ಟು ಬಲಿಷ್ಠಗೊಳಿಸುವ ಕಾರ್ಯಕ್ಕೆ ಯುವ ಸಮುದಾಯ ಮುಂದೆ ಬರಬೇಕು ಎಂದರು.
ಶತಮಾನೋತ್ಸವ ಆಚರಣೆ ಸಮಿತಿಯ ಕಾರ್ಯಾಧ್ಯಕ್ಷ, ವಿಶ್ವ ದೇವಾಡಿಗ ಸಂಘದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ ಮಾತನಾಡಿ, 1925ರಲ್ಲಿ ಮುಂಬೈಗೆ ಆಗಮಿಸಿದ ನಮ್ಮ ಹಿರಿಯರು ದೇವಾಡಿಗ ಸಮಾಜವನ್ನು ಸ್ಥಾಪಿಸುವ ಕನಸ್ಸನ್ನು ನನಸಾಗಿಸಿದ್ದು, ಆಗಿನ ನಮ್ಮ ಹಿರಿಯರು ಬಹಳ ಕಷ್ಟಪಟ್ಟು ಇಲ್ಲಿ ದುಡಿದಿದ್ದಾರೆ. ನಮ್ಮ ಊರಿನಿಂದ ಬರುವ ನಮ್ಮ ಸಮಾಜ ಬಾಂಧವರಿಗೆ ಇರಲು, ಕೂಡ ಒಂದು ಸ್ಥಳ ಬೇಕು ಎಂಬ ಉದ್ದೇಶದಿಂದ ಕೂಡಾ ದೇವಾಡಿಗ ಸುಧಾರಕ ಸಂಘವನ್ನು ಅಂದು ಸ್ಥಾಪಿಸಿದರು. ಬ್ರಿಟಿಷರ ಕಾಲದಲ್ಲಿ ನಮ್ಮ ಸಮಾಜದ ಹಿರಿಯರು ಈ ಸಂಘಟನೆ ಸ್ಥಾಪಿಸಿದ್ದು ನಿಜಕ್ಕೂ ಅಭಿನಂದನಾರ್ಹ ಎಂದರು.
ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು ಅಧ್ಯಕ್ಷ ಅಶೋಕ್ ಮೊಯ್ಲಿ, ದೇವಾಡಿಗ ಸಂಘ ಬೆಂಗಳೂರು ಅಧ್ಯಕ್ಷ ರಮೇಶ್ ಎನ್.ದೇವಾಡಿಗ, ಉಡುಪಿ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಗಣೇಶ್ ದೇವಾಡಿಗ ಅಂಬಲಪಾಡಿ, ದುಬೈ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ ಟ್ರೇಡಿಂಗ್ ಸಿಎಂಡಿ ಹರೀಶ್ ಶೇರಿಗಾರ್, ದುಬೈ ದೇವಾಡಿಗ ಸಂಘದ ಅಧ್ಯಕ್ಷ ದಿನೇಶ್ ಕುಮಾರ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ವಿಶ್ವಾಸ್ ಎಂ.ಅತ್ತಾವರ್, ದುಬೈ ಈದ್ ಅಲ್ ಬಸ್ತಿ ಮುಕ್ತ ಎಲ್‌ಎಲ್ಸಿಯ ನಾರಾಯಣ್ ದೇವಾಡಿಗ, ಭಾಸ್ಕರ್ ಶೇರಿಗಾರ್ ಯುಎಸ್‌ಎ, ದುಬೈ ಉದ್ಯಮಿ ದಿನೇಶ್ ಸಿ ದೇವಾಡಿಗ, ಬಾರಕೂರು ಶ್ರೀಏಕನಾಥೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಅಣ್ಣಯ್ಯ ಬಿ.ಶೇರಿಗಾರ್, ಹರೀಶ್‌ಚಂದ್ರ ದೇವಾಡಿಗ ದುಬೈ, ಉದ್ಯಮಿಗಳಾದ ನಾಗರಾಜ್ ಜಿ.ದೇವಾಡಿಗ, ನರೇಶ್ ಮೊಯ್ಲಿ, ಮಹಾಬಲ ದೇವಾಡಿಗ, ಮಂಗಳೂರಿನ ಎಸ್‌ಡಿಎಂ ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜ್ ಮಾಜಿ ನಿರ್ದೇಶಕ ಡಾ.ದೇವರಾಜ್ ಕಂಕನಾಡಿ, ಬೆಂಗಳೂರಿನ ಎಚ್.ಎಸ್. ದೇವಾಡಿಗ, ಹರ್ಷ ಮೊಯ್ಲಿ, ಪ್ರಮೀಳಾ ಪ್ರವೀಣ್ ದೇವಾಡಿಗ, ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಮಾಜದ ಗಣ್ಯರನ್ನು ಹಾಗೂ ಸಂಘದಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜ ಬಾಂಧವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶತಮಾನೋತ್ಸವ ಆಚರಣೆಯ ಸಮಿತಿಯ ಮುಖ್ಯ ಸಂಯೋಜಕ ಹಿರಿಯಡ್ಕ ಮೋಹನ್‌ದಾಸ್ ಶುಭ ಹಾರೈಸಿದರು.
ದೇವಾಡಿಗ ಸಂಘ ಮುಂಬೈ ಅಧ್ಯಕ್ಷ ಪ್ರವೀಣ್ ದೇವಾಡಿಗ ಸ್ವಾಗತಿಸಿದರು. ಅಶ್ವಿನಿ ದೇವಾಡಿಗ ಹಾಗೂ ಸೋನಾಲಿ ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ವಿಶ್ವನಾಥ್ ದೇವಾಡಿಗ ವಂದಿಸಿದರು.