ವಕೀಲನಿಂದ ಹಣ ವಸೂಲಿ ಆರೋಪ: ಮಹಿಳೆ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲು

ಕೋಟ, ಎ.6: ಯುವ ವಕೀಲರೊಬ್ಬರನ್ನು ಹೆದರಿಸಿ ಅವರಿಂದ ಹಣ ವಸೂಲಿ ಮಾಡಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೇವೆಂದ್ರ ಮತ್ತು ಮೂಕಾಂಬು ಎಂಬವರ ವಿರುದ್ದ ಪ್ರಕರಣ ದಾಖಲಾಗಿದೆ
ಕುಂದಾಪುರದ ವಕೀಲ ನೀಲ್ ಬ್ರಾಯನ್ ಪಿರೇರಾ ಎಂಬವರು 2023ರ ಜನವರಿ ತಿಂಗಳಲ್ಲಿ ತನ್ನ ಕಚೇರಿಯಲ್ಲಿದ್ದಾಗ ದೇವೆಂದ್ರ ಸುವರ್ಣ ಎಂಬವರು ಮೂಕಾಂಬು ಎಂಬಾಕೆಯನ್ನು ಕರೆದುಕೊಂಡು ಬಂದಿದ್ದು, ಬಳಿಕ ಯಾವುದೋ ಒಂದು ಕೇಸಿನ ಬಗ್ಗೆ ಮಾತಾಡಿಕೊಂಡು ಹೋಗಿದ್ದರು. ಇದೇ ವೇಳೆ ನೀಲ್ ಅವರ ಮೊಬೈಲ್ ನಂಬರ್ ಮುಕಾಂಬು ಪಡೆದುಕೊಂಡಿದ್ದರು.
ನಂತರ ದೇವೆಂದ್ರ ಸುವರ್ಣ, ಮೂಕಾಂಬುರವರೊಂದಿಗೆ ಅದೇ ಕಚೇರಿಗೆ ಬಂದು, ನೀಲ್ ಅವರನ್ನು ಉದ್ದೇಶಿಸಿ ನೀನು ನಮಗೆ 50,000ರೂ. ಹಣವನ್ನು ನೀಡಬೇಕು, ಇಲ್ಲವಾದಲ್ಲಿ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ನೀನು ಮೂಕಾಂಬು ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಿಯಾ ಎಂದು ಸುಳ್ಳೂ ಪ್ರಕರಣವನ್ನು ದಾಖಲಿಸಿ ನಿನ್ನ ಮಾನ ಮರ್ಯಾದೇ ತೆಗೆಯುವುದಾಗಿ ಹೆದರಿಸಿದ್ದಾರೆ.
ಅಲ್ಲದೆ ನೀಲ್ ಅವರಿಗೆ ಇದೇ ರೀತಿ ಪದೇ ಪದೇ ಭಯ ಹುಟ್ಟಿಸಿ ಅವಮಾನ ಪಡಿಸುವುದಾಗಿ ಬೆದರಿಸಿ ದ್ದಾರೆ ಮತ್ತು ಗೂಂಡಾಗಳನ್ನು ಬಳಸಿ ಕೊಲ್ಲುವುದಾಗಿ ಹೆದರಿಸಿ 18000ರೂ. ಹಣವನ್ನು ಬಲಾತ್ಕಾರ ವಾಗಿ ವಸೂಲಿ ಮಾಡಿದ್ದಾರೆಂದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೋಟ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.