ಹೆಬ್ರಿ: ಮತ್ತಾವು ಸೇತುವೆ ನಿರ್ಮಾಣಕ್ಕೆ 2 ಕೋಟಿ ಮಂಜೂರು

Update: 2025-04-06 19:37 IST
ಹೆಬ್ರಿ: ಮತ್ತಾವು ಸೇತುವೆ ನಿರ್ಮಾಣಕ್ಕೆ 2 ಕೋಟಿ ಮಂಜೂರು
  • whatsapp icon

ಉಡುಪಿ, ಎ.6: ಹೆಬ್ರಿ ತಾಲೂಕಿನ ಕಬ್ಬಿನಾಲೆ ಸಮೀಪದ ಮತ್ತಾವು ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರ ಎರಡು ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ ಎಂದು ಕಾರ್ಕಳದ ಕಾಂಗ್ರೆಸ್ ನಾಯಕ ಮುನಿಯಾಲು ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಈ ಮೂಲಕ ಮಲೆಕುಡಿಯ ಸಮುದಾ ಯವೇ ಅಧಿಕ ಸಂಖ್ಯೆಯಲ್ಲಿರುವ ಮತ್ತಾವು ಜನತೆಯ ಎರಡು ದಶಕಗಳ ಕನಸು ಕೊನೆಗೂ ನನಸಾಗುವ ಸಾಧ್ಯತೆ ಮತ್ತೆ ಚಿಗುರಿದೆ.

ನಕ್ಸಲ್ ಬಾಧಿತ ಕಬ್ಬಿನಾಲೆಯ ಮತ್ತಾವು 2005ರ ಜೂನ್ ತಿಂಗಳಲ್ಲಿ ನಕ್ಸಲೈಟ್‌ಗಳ ಕಾರಣದಿಂದ ರಾಜ್ಯದ ಭೂಪಟದಲ್ಲಿ ಗುರುತಿಸಿಕೊಂಡಿತ್ತು. 2005ರ ಜೂನ್ 23ರಂದು ದೇವರಬಾಳು ಗ್ರಾಮದಲ್ಲಿ ನಡೆದ ಪೊಲೀಸ್ ಎನ್‌ಕೌಂಟರ್‌ಗೆ ಇಬ್ಬರು ನಕ್ಸಲೈಟ್‌ಗಳು ಬಲಿಯಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ನಕ್ಸಲರು ಕೆಲವೇ ದಿನಗಳಲ್ಲಿ ಮತ್ತಾವು ಬಳಿ ಸಾಗುತಿದ್ದ ಪೊಲೀಸ್ ಜೀಪ್‌ನ ಮೇಲೆ ಹ್ಯಾಂಡ್‌ಗ್ರೆನೆಡ್ ಎಸೆದು 7 ಮಂದಿ ಪೊಲೀಸರನ್ನು ತೀವ್ರವಾಗಿ ಗಾಯಗೊಳಿಸಿದ್ದರು. ಈ ಸಂದರ್ಭದಲ್ಲಿ ಮತ್ತಾವು ಎಂಬ ತೀರಾ ಹಿಂದುಳಿದ, ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಬುಡಕಟ್ಟು ಜನಾಂಗವೇ ಹೆಚ್ಚಾಗಿದ್ದ ಗ್ರಾಮದ ಹೆಸರು ನಾಡಿಗೆ ಪರಿಚಯ ವಾಗಿತ್ತು.

ಮತ್ತಾವು ಎಂಬ ಕಾಡಿನ ಮಧ್ಯೆ ಇದ್ದ ಊರು ಹೊಳೆಯ ಮೂಲಕ ಹೊರಜಗತ್ತಿನಿಂದ ಬೇರ್ಪಟ್ಟಿತ್ತು. ಮಳೆಗಾಲದ ಆರು ತಿಂಗಳು ಈ ಊರಿನ ಸಂಪರ್ಕವೇ ಹರಸಾಹಸ ಎನಿಸಿತ್ತು. ಉಳಿದ ಅವಧಿಯಲ್ಲಿ ತಾತ್ಕಾಲಿಕ ಕಾಲುಸಂಕದ ಮೂಲಕ ಮತ್ತಾವಿನ ಜನರು ಹೊರಪ್ರಪಂಚಕ್ಕೆ ಕಾಲಿರಿಸುತಿದ್ದರು.

ನಕ್ಸಲರ ಪ್ರವೇಶದ ಮೂಲಕ ಹೊರಜಗತ್ತಿನ ಅರಿವಿಗೆ ಬಂದ ಮತ್ತಾವಿನ ಸಮಸ್ಯೆಗಳನ್ನು ಬಗೆಹರಿಸು ವಂತೆ ಅಲ್ಲಿನ ಜನರು ನಿರಂತರವಾಗಿ ವಿವಿಧ ರಾಜಕೀಯ ಪಕ್ಷಗಳ ಬೆನ್ನು ಹತ್ತಿದ್ದರು. ವಿದ್ಯುತ್ ಸೇರಿ ದಂತೆ ಹಲವು ಸಮಸ್ಯೆಗಳು ಬಗೆಹರಿದರೂ ಶಾಶ್ವತ ಮತ್ತಾವು ಸೇತುವೆ ನಿರ್ಮಾಣ ಮಾತ್ರ ಇವರ ಪಾಲಿಗೆ ಗಗನಕುಸುಮದಂತಾಗಿತ್ತು.

ಕಳೆದ ಫೆಬ್ರವರಿ ತಿಂಗಳಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಉಡುಪಿ ಜಿಲ್ಲೆಗೆ ಆಗಮಿಸಿದ್ದಾಗ ಮುನಿಯಾಲು ಉದಯ ಶೆಟ್ಟಿ ಅವರು ಮತ್ತಾವು ಸೇತುವೆಯ ಕುರಿತಂತೆ ನೀಡಿದ ಮನ ವಿಗೆ ತಕ್ಷಣ ಸ್ಪಂಧಿಸಿದ ಸಚಿವರು ಎರಡು ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಇದರೊಂದಿಗೆ ಅರಣ್ಯ ಇಲಾಖೆಯ ಸಮಸ್ಯೆಗಳನ್ನೂ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News