ಕನ್ನಡದ ಸಮಗ್ರ ಬೇಡಿಕೆ ಈಡೇರಿಕೆಗೆ ಈಡುಗಾಯಿ ಒಡೆಯುವ ಚಳವಳಿ: ವಾಟಾಳ್ ನಾಗರಾಜ್ ಘೋಷಣೆ

Update: 2025-04-03 21:03 IST
ಕನ್ನಡದ ಸಮಗ್ರ ಬೇಡಿಕೆ ಈಡೇರಿಕೆಗೆ ಈಡುಗಾಯಿ ಒಡೆಯುವ ಚಳವಳಿ: ವಾಟಾಳ್ ನಾಗರಾಜ್ ಘೋಷಣೆ
  • whatsapp icon

ಉಡುಪಿ, ಎ.3: ಕನ್ನಡದ ಕುರಿತಂತೆ ನಮ್ಮೆಲ್ಲರ ಸಮಗ್ರ ಬೇಡಿಕೆ ಈಡೇರಿಕೆಗಾಗಿ ಇದೇ ಎ.26ರಂದು ರಾಜ್ಯಾದ್ಯಂ ಈಡುಗಾಯಿ ಒಡೆಯುವ ಅಭಿಯಾನವನ್ನು ಹಮ್ಮಿಕೊಂಡಿರುವುದಾಗಿ ಕನ್ನಡ ಪರ ಹೋರಾಟಗಾರ ಹಾಗೂ ಮಾಜಿ ಶಾಸಕ, ಕನ್ನಡ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಉಡುಪಿಯ ಪ್ರವಾಸಿ ಮಂದಿರದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಪರ ಹಾಗೂ ಕನ್ನಡಿಗರ ಸಮಗ್ರ ಬೇಡಿಕೆಯ ಈಡೇರಿಕೆಗಾಗಿ ನಾವೀ ವಿನೂತನ ಅಭಿಯಾನ ನಡೆಸಲಿದ್ದು, ಇಡೀ ರಾಜ್ಯದಲ್ಲಿ ಎರಡು ಕೋಟಿಯಷ್ಟು ಈಡುಗಾಯಿ ಒಡೆಯುವ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದರು.

ತೆಂಗಿನಕಾಯಿಯನ್ನು ಯಾರೂ ಬೇಕಾದರೂ ಒಡೆಯಬಹುದು. ಅದನ್ನು ಎಲ್ಲಿ ಬೇಕಿದ್ದರೂ ಒಡೆಯ ಬಹುದು. ದೇವಸ್ಥಾನದ ಬಳಿ ಒಡೆಯಿರಿ, ಮನೆ ಬಳಿ ಒಡೆಯಿರಿ, ಬೀದಿಯಲ್ಲಿ, ಹೊಟೇಲಿನಲ್ಲಿ ಎಲ್ಲಿ ಬೇಕಿದ್ದರೂ ಒಡೆಯಿರಿ. ಇದಕ್ಕೆ ಎಲ್ಲರೂ ಕೈಜೋಡಿಸಬಹುದು. ಕರ್ನಾಟಕ ಬಂದ್ ಮಾಡಿದರೆ ಹಲವರು ತಕರಾರು ತೆಗಿತಾರೆ. ಹೊಟೇಲ್ ಮುಚ್ಚಕ್ಕಾಗಲ್ಲ, ಅಂಗಡಿ ಮುಚ್ಚಕಾಗಲ್ಲ. ನಾವು ನೈತಿಕ ಬೆಂಬಲ ನೀಡುತ್ತೇವೆ ಎಂದು. ಆದರೆ ಇಲ್ಲಿ ಅಂಥ ಯಾವುದೇ ಸಮಸ್ಯೆಗಳಿಲ್ಲ ಎಂದು ವಾಟಾಳ್ ತಿಳಿಸಿದರು.

ಅಖಂಡ ಕರ್ನಾಟಕದಾದ್ಯಂತ ಕನಿಷ್ಠ 2 ಕೋಟಿ ಈಡುಗಾಯಿ ಒಡೆಯುವ ಚಳವಳಿ ಇಡೀ ರಾಜ್ಯಾದ್ಯಂತ ನಡೆಯಬೇಕು. ಮಹದಾಯಿ, ಕಳಸಬಂಡೂರಿ, ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ರಾಜ್ಯದ ಮೇಲಾಗುತ್ತಿರುವ ನಿರಂತರ ದಬ್ಬಾಳಿಕೆ ವಿರುದ್ಧ ಕನ್ನಡಿಗರ ವಿವಿಧ ಸಮಸ್ಯೆಗಳು ಬಗ್ಗೆ ಗಮನ ಸೆಳೆಯಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಬೆಳಗಾವಿಯಲ್ಲಿ ನಮ್ಮೆಲ್ಲಾ ಪಕ್ಷಗಳ ರಾಜಕಾರಣಿಗಳು ಮಹಾರಾಷ್ಟ್ರ ಏಕೀಕರಣ ಸಮಿತಿ ಜೊತೆ ಮರಾಠಿ ಮತಗಳಿಗಾಗಿ ಸೇರಿಕೊಂಡಿದ್ದಾರೆ. ನಾವು ಕನ್ನಡ ಪರ ಸಂಘಟನೆಗಳು ಮಾತ್ರ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇದೀಗ ಎ.26ರ ವಿಶೇಷ ಅಭಿಯಾನದಲ್ಲಿ ರಾಜ್ಯದ ಸಮಸ್ತ ಕನ್ನಡಿಗರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಇತ್ತೀಚಿನ ವರ್ಷಗಳಲ್ಲಿ ವಿಧಾನಮಂಡಲದಲ್ಲಿ ಚರ್ಚೆಯ ಗಾಂಭೀರ‌್ಯ, ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಐದು ಬಾರಿಯ ಶಾಸಕ ವಾಟಾಳ್ ನಾಗರಾಜ್, ಶಾಸನ ಸಭೆಗಳು ಸಂವಿಧಾನ ಬದ್ಧ ವಾಗಿ ನಡೆಯಬೇಕು. ಕಾನೂನು ಮಾಡುವ ಸಭೆ ಶಾಸನ ಸಭೆ. ಇಲ್ಲಿ ನಡೆಯುವ ಚರ್ಚೆಗೆ ಅದರದೇ ಆದ ಗಾಂಭೀರ‌್ಯವಿದೆ ಎಂದರು.

1967ರಲ್ಲಿ ನಿಜಲಿಂಗಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ತಾನು ಶಾಸಕ ನಾಗಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದೆ. ಅಂದು ನಡೆಯುತಿದ್ದ ಚರ್ಚೆ ಗುಣಮಟ್ಟವನ್ನು ವಿವರಿಸಿ ಹೇಳಿದ ವಾಟಾಳ್, ಈ ಬಾರಿ 18 ಶಾಸಕರನ್ನು ಆರು ತಿಂಗಳ ಕಾಲ ಹೊರಹಾಕುವ ಘಟನೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿದರು.


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News