ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿದ್ವಾಂಸ ಪಾದೇಕಲ್ಲು ವಿಷ್ಣ ಭಟ್

Update: 2025-04-03 21:01 IST
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿದ್ವಾಂಸ ಪಾದೇಕಲ್ಲು ವಿಷ್ಣ ಭಟ್

ಪಾದೇಕಲ್ಲು ವಿಷ್ಣ ಭಟ್

  • whatsapp icon

ಉಡುಪಿ, ಎ.3: ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಇದೇ ಎ.30 ಹಾಗೂ ಮೇ 1ರಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಆಶ್ರಯದಲ್ಲಿ ನಡೆಯಲಿರುವ 17ನೇ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿದ್ವಾಂಸ, ನಿವೃತ್ತ ಪ್ರಾಂಶುಪಾಲ ಡಾ.ಪಾದೇಕಲ್ಲು ವಿಷ್ಣು ಭಟ್ಟ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾದೇಕಲ್ಲು ವಿಷ್ಣು ಭಟ್, 1956ರ ಫೆ. 6ರಂದು ಬಂಟ್ವಾಳ ತಾಲೂಕಿನ ಕರೋಪಾಡಿಯ ಪಾದೇಕಲ್ಲಿನಲ್ಲಿ ಹುಟ್ಟಿದರು. ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಬಂಟ್ವಾಳ ಮತ್ತು ಪುತ್ತೂರಿನಲ್ಲಿ ಪೂರೈಸಿ, ಸ್ನಾತಕೋತ್ತರ ಮತ್ತು ಪಿಎಚ್‌ಡಿ ಸಂಶೋಧನೆಯನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿದರು.

ಬಳಿಕ ಉಡುಪಿ ಹಾಗೂ ಮಂಗಳೂರಿನ ವಿವಿಧ ಸರಕಾರಿ ಕಾಲೇಜುಗಳಲ್ಲಿ ಉಪನ್ಯಾಸಕ ಮತ್ತು ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ 2016ರ ಫೆ. 29ರಂದು ನಿವೃತ್ತಿಹೊಂದಿದಾರೆ.

ಸಂಶೋಧನಾ ಕ್ಷೇತ್ರದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿರುವ ವಿಷ್ಣು ಭಟ್ಟರು, ತುಳು ನಿಘಂಟು ಯೋಜನೆಯಲ್ಲಿ ಸಹಾಯಕ ಸಂಪಾದಕ, ತುಳುವ ತ್ರೈಮಾಸಿಕ ಪತ್ರಿಕೆಯ ಸಹ ಸಂಪಾದಕರಾಗಿ ಗುರು ತಿಸಿಕೊಂಡಿದ್ದಾರೆ. ಇವರು ಬರೆದ ಪ್ರಮುಖ ಕೃತಿಗಳು ಸೇಡಿಯಾಪು, ಸೇಡಿಯಾಪು ಕೃಷ್ಣಭಟ್ಟರು, ಪಂಡಿತವರೇಣ್ಯ, ಶ್ರೀಭಾಗವತೋ, ಪ್ರಸಂಗ ವಿಶ್ಲೇಷಣೆ, ಏರ್ಯ ಲಕ್ಷ್ಮೀನಾರಾಯಣ ಆಳ್ವ ಸೇರಿದಂತೆ 21ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.

50ಕ್ಕೂ ಅಧಿಕ ಸಂಪಾದಿತ, ಸಹಸಂಪಾದಿತ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಯಾಗಿ, ಆಕಾಶವಾಣಿಯಲ್ಲಿ ಚಿಂತನ ಮೊದಲಾದ ಕಾರ್ಯಕ್ರಮಗಳಲ್ಲಿ ಉಪನ್ಯಾಸಕರಾಗಿ ಗುರುತಿಸಿ ಕೊಂಡಿದ್ದು, ಆಕಾಶವಾಣಿಯ ಯಕ್ಷಗಾನದಲ್ಲಿಯೂ ಹಲವಾರು ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಇವರ ಯಕ್ಷಗಾನಾಧ್ಯಯನ ಕೃತಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪುಸ್ತಕ ಬಹುಮಾನ 2017ರಲ್ಲಿ ಲಭಿಸಿದೆ. ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ಸಾಹಿತ್ಯ ಕಮ್ಮಟ ಮತ್ತು ಸಮ್ಮೇಳನಗಳ ಅಧ್ಯಕ್ಷತೆ ವಹಿಸಿರುವ ಇವರಿಗೆ ಈ ಬಾರಿಯ 17ನೇ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಒಲಿದುಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News