ಕಾರು ಢಿಕ್ಕಿ: ರಸ್ತೆ ದಾಟಲು ನಿಂತಿದ್ದ ವಿದ್ಯಾರ್ಥಿ ಮೃತ್ಯು; ಎ.2ರಂದು ರಾ.ಹೆದ್ದಾರಿ ವಿರುದ್ಧ ಪ್ರತಿಭಟನೆ

ಬ್ರಹ್ಮಾವರ, ಎ.1: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಬ್ರಹ್ಮಾವರದ ಬಿರಿಯಾನಿ ಪಾಯಿಂಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗ್ಗೆ 8.30ರ ಸುಮಾರಿಗೆ ನಡೆದಿದೆ.
ಮೃತರನ್ನು ಬ್ರಹ್ಮಾವರ ಎಸ್‌ಎಂಎಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ವಂಶ್ ಶೆಟ್ಟಿ(11) ಎಂದು ಗುರುತಿಸಲಾಗಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಬೇಸಿಗೆ ಕ್ರೀಡಾ ಶಿಬಿರ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ವಂಶ್ ಶೆಟ್ಟಿ ಶಾಲೆಗೆ ಹೋಗಲು ರಸ್ತೆ ದಾಟಲು ರಸ್ತೆ ಬದಿ ನಿಂತುಕೊಂಡಿದ್ದನು. ಈ ವೇಳೆ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು, ರಸ್ತೆಯ ತೀರಾ ಎಡಭಾಗಕ್ಕೆ ಬಂದು ವಂಶ್ ಶೆಟ್ಟಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರ ಪರಿಣಾಮ ವಂಶ್ ಶೆಟ್ಟಿ ರಸ್ತೆಗೆ ಎಸೆಯಲ್ಪಟ್ಟು, ತಲೆಗೆ ತೀವ್ರ ಸ್ವರೂಪದ ರಕ್ತಗಾಯಗೊಂಡರು. ಕೂಡಲೇ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಂಶ್ ಶೆಟ್ಟಿ ಬೆಳಗ್ಗೆ 9.30ರ ಸುಮಾರಿಗೆ ಮೃತಪಟ್ಟರೆಂದು ತಿಳಿದು ಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾ.ಹೆದ್ದಾರಿ ವಿರುದ್ಧ ಎ.2ರಂದು ಪ್ರತಿಭಟನೆ
ಅಪಘಾತ ವಲಯವಾಗಿ ಮಾರ್ಪಟ್ಟಿರುವ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅವ್ಯವಸ್ಥೆ ವಿರೋಧಿಸಿ ಎ.2ರಂದು ಬೆಳಗ್ಗೆ 9.30ಕ್ಕೆ ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜು ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಇಲ್ಲಿ ಹಲವು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿರುವುದರಿಂದ ಅಗತ್ಯ ವಾಗಿರುವ ಸರ್ವಿಸ್ ರಸ್ತೆ ಹಾಗೂ ಫ್ಲೈ ಓವರ್ ನಿರ್ಮಿಸಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ. ಇದರಲ್ಲಿ ಕಾಲೇಜು ವಿದ್ಯಾರ್ಥಿ ಗಳು ಹಾಗೂ ಬ್ರಹ್ಮಾವರದ ಸುಮಾರು 23ಕ್ಕೂ ಹೆಚ್ಚು ಸಂಘಟನೆಗಳು ಕೈಜೋಡಿಸಲಿವೆ ಎಂದು ತಿಳಿದುಬಂದಿದೆ.