ಮುಲ್ಕಿ | ಕೆಮ್ರಾಲ್ ಗ್ರಾಪಂ ವ್ಯಾಪ್ತಿಯಲ್ಲಿ ನೀರಿಗೆ ಬರ : ಗ್ರಾಮಸ್ಥರ ಆಕ್ರೋಶ

ಸಾಂದರ್ಭಿಕ ಚಿತ್ರ
ಮುಲ್ಕಿ : ಇಲ್ಲಿನ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಕಾಡು ಪ್ರದೇಶದಲ್ಲಿ ಕಳೆದ 5 ದಿನಗಳಿಂದ ನೀರು ಬಾರದೇ ಜನರು ತತ್ತರಿಸಿದ್ದಾರೆ.
ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಕಾಡು ಗ್ರಾಮ ಪಂಚಾಯತ್ ನ ಜನರು ನಳ್ಳಿ ನೀರನ್ನೇ ಅವಲಂಭಿಸಿಕೊಂಡಿದ್ದು, ಐದು ದಿನಗಳಿಂದ ನೀರು ಬಾರದೆ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ಸಂತ್ರಸ್ತರು ದೂರಿದ್ದಾರೆ.
ಈ ಬಗ್ಗೆ ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮೊಯ್ಯದ್ದಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ʼಕೊರೆಸಲಾಗಿರುವ ಎರಡು ಬೊರ್ ವೆಲ್ ಗಳಲ್ಲಿ ನೀರು ಸಿಕ್ಕಿಲ್ಲ. ಅಲ್ಲದೆ, ವಿದ್ಯುತ್ ಕಡಿತವಾಗಿರುವ ಕಾರಣದಿಂದಾಗಿ ನೀರು ಬರುತ್ತಿಲ್ಲ. ಕರೆಂಟ್ ಬಂದರೆ ನೀರು ನೀಡುತ್ತೇವೆ ಎಂದು ತಿಳಿಸಿದ್ದಾರೆ.
ನೀರು ಬಾರದಿರುವ ಬಗ್ಗೆ ಗ್ರಾಮ ಪಂಚಾಯತ್ ಗೆ ಮಾಹಿತಿ ಇಲ್ಲ. ಸಿಬ್ಬಂದಿಯೊಂದಿಗೆ ಮಾತನಾಡಿ ಸರಿಪಡಿಸಲಾಗುವುದು.
- ಅರುಣ್ ಪ್ರದೀಪ್, ಕೆಮ್ರಾಲ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಹೊಸಕಾಡು ಭಜನಾ ಮಂದಿರದ ಬಳಿ ಎರಡು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಆದರೆ, ಆ ಭಾಗದಲ್ಲಿ ನೀರು ಬಾರದಿರುವ ಬಗ್ಗೆ ಮಾಹಿತಿ ಇದೆ. ವಾಟರ್ ಮೆನ್ ಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
- ರೇವತಿ, ಗ್ರಾಮ ಪಂಚಾಯತ್ ವಾರ್ಡ್ ಸದಸ್ಯೆ