ಎನ್‌ಡಿಎ ವರ್ಸಸ್ ಇಂಡಿಯಾ ಅಲ್ಲ, ಭಾರತ ವರ್ಸಸ್ ಇಂಡಿಯಾ: ಸಚಿವೆ ಶೋಭಾ ಕರಂದ್ಲಾಜೆ

Update: 2023-07-19 13:18 GMT

ಉಡುಪಿ, ಜು.19: ದೇಶವನ್ನು ಕಳೆದ 60 ವರ್ಷಗಳ ಕಾಲ ಲೂಟಿ ಮಾಡಿದವರು ಇಂದು ಮತ್ತೆ ಒಂದಾಗಿದ್ದಾರೆ. ತಮ್ಮ ಒಕ್ಕೂಟಕ್ಕೆ ಇಂಡಿಯಾ ಎಂಬ ಹೆಸರು ಇಟ್ಟುಕೊಂಡಿದ್ದಾರೆ. ಬ್ರಿಟಿಷ್ ಲೂಟಿಕೋರರು ಉಪಯೋಗ ಮಾಡಿದ ಹೆಸರು ಇಟ್ಟಿದ್ದಾರೆ. ಬ್ರಿಟಿಷರಂತೆ ಈಗ ಹೊಸ ಈಸ್ಟ್ ಇಂಡಿಯಾ ಕಂಪನಿ ಶುರು ಮಾಡಿದ್ದಾರೆ. ಇದು ಭಾರತ ವರ್ಸಸ್ ಈಸ್ಟ್ ಇಂಡಿಯಾ ಕಂಪನಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದ ಸಾರ್ವಭೌಮತೆಯನ್ನು ಇಡೀ ಪ್ರಪಂಚಕ್ಕೆ ಪಸರಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ಇವರು ಒಟ್ಟಾಗಿದ್ದಾರೆ. ಅದಕ್ಕೆ ಸಂವಿಧಾನ ವಿರೋಧಿ ಹೆಸರು ಇಟ್ಟುಕೊಂಡಿದ್ದಾರೆ. ಆರ್ಟಿಕಲ್ 1 ಪ್ರಕಾರ ಈ ರೀತಿಯ ಯಾವುದೇ ಹೆಸರು ಇಡುವಂತಿಲ್ಲ. ಕಾಯಿದೆ ಪ್ರಕಾರ ಇದು ತಪ್ಪು. ಇಂಡಿಯಾ ಎಂಬ ಹೆಸರನ್ನು ಯಾವುದೇ ಪಕ್ಷ, ಸಂಘಟನೆ ಸಂಸ್ಥೆಗೆ ಇಡುವಂತಿಲ್ಲ ಎಂದರು.

60 ವರ್ಷಗಳ ಕಾಲ ದೇಶವನ್ನು ಆಳಿದವರು ಬೇರೆ ಯಾವುದೇ ಹೆಸರಿಟ್ಟರೆ ಜನ ಬೆಲೆ ಕೊಡುವುದಿಲ್ಲ ಎಂಬ ಕಾರಣಕ್ಕೆ ಇಂಡಿಯಾ ಎಂಬ ಹೆಸರಿಟ್ಟಿದ್ದಾರೆ. ಇದು ಎನ್‌ಡಿಎ ವರ್ಸಸ್ ಇಂಡಿಯಾ ಅಲ್ಲ, ಇದು ಭಾರತ ವರ್ಸಸ್ ಇಂಡಿಯಾ. ಭಾರತದಲ್ಲಿ ಈಗ ಹೊಸ ಕಂಪನಿ ಆರಂಭವಾಗಿದೆ. ಈ ಈಸ್ಟ್ ಇಂಡಿಯಾ ಕಂಪೆನಿಗೆ ನರೇಂದ್ರ ಮೋದಿಯೇ ಟಾರ್ಗೆಟ್ ಆಗಿದ್ದಾರೆ. ಆದರೆ ಭಾರತದ ಜನ ನರೇಂದ್ರ ಮೋದಿಗೆ ಬೆಂಬಲ ನೀಡುತ್ತಾರೆ ಎಂದು ಅವರು ತಿಳಿಸಿದರು.

ಅಜಿತ್ ಪವರ್ ಎನ್‌ಡಿಎ ಸೇರ್ಪಡೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕುಟುಂಬ ರಾಜಕಾರಣದಿಂದ ಬೇಸತ್ತು ಅಜಿತ್ ಪವರ್ ಎನ್‌ಡಿಎ ಸೇರಿದ್ದಾರೆ. ಅಜಿತ್ ಪವಾರ್ ಅವರೇ ಎನ್‌ಸಿಪಿ ನಾಯಕ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಎನ್‌ಸಿಪಿ ಅಧ್ಯಕ್ಷನ ಚುನಾವಣೆಯಲ್ಲಿ ಅಜಿತ್ ಪವಾರ್ ರನ್ನು ಗಣನೆಗೆ ತೆಗೆದುಕೊಂಡಿಲ್ಲ. ಕುಟುಂಬ ರಾಜಕಾರಣದಿಂದ ಬೇಸತ್ತು ಅವರು ನಮ್ಮೊಂದಿಗೆ ಸೇರಿರಬಹುದು. ಅಜಿತ್ ಪವಾರ್ ಜೊತೆ ಬಿಜೆಪಿ ಗಟ್ಟಿಯಾಗಿ ನಿಲ್ಲುತ್ತದೆ ಎಂದರು.

ರಾಜ್ಯದಲ್ಲಿ ಗ್ಯಾರಂಟಿ ಜಾರಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೂರು ನಾಲ್ಕು ತಿಂಗಳಲ್ಲಿ ಕೆಎಸ್‌ಆರ್‌ಟಿಸಿ ನಿಗಮ ಸ್ಥಗಿತ ಕೊಳ್ಳುವ ಆತಂಕ ಇದೆ. ಕೆಎಸ್‌ಆರ್‌ಟಿಸಿಗೆ ಬಜೆಟ್‌ನಲ್ಲಿ ಯಾವುದೇ ವಿಶೇಷ ಅನುದಾನ ಕೊಟ್ಟಿಲ್ಲ. 200 ಯೂನಿಟ್ ಉಚಿತ ವಿದ್ಯುತ್ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಭಾಗ್ಯಲಕ್ಷ್ಮಿ ಮತ್ತು ನಿರುದ್ಯೋಗಿ ಭತ್ತೆ ಯೋಜನೆಯನ್ನು ಮುಂದೂಡುತ್ತಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಎಲ್ಲಾ ಗ್ಯಾರೆಂಟಿ ವಿಚಾರದಲ್ಲಿ ಗೊಂದಲ ಕಾಡುತ್ತಿದೆ. ಕೇಂದ್ರ ಸರಕಾರ ಕರೆದಿರುವ ಟೆಂಡರ್‌ನಲ್ಲಿ ಬಿಡ್ ಮಾಡುತ್ತಿಲ್ಲ. ಮೋದಿಯನ್ನು ದೂರುವ ಚಾಳಿ ಮಾತ್ರ ಮುಂದುವರೆಸಿದ್ದಾರೆ. ಗ್ಯಾರೆಂಟಿ ಜಾರಿಯಾದ ನಂತರ ಸಂಬಂಧಪಟ್ಟ ಇಲಾಖೆಯ ನಷ್ಟ ಹೇಗೆ ತುಂಬುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಸಂತೆಕಟ್ಟೆ ಅಂಡರ್‌ಪಾಸ್: ಅಧಿಕಾರಿಗಳ ವಿರುದ್ಧ ಕ್ರಮ

ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರ ಅಂಡರ್‌ಪಾಸ್ ಕಾಮಗಾರಿಯಲ್ಲಿ ಆಗಿರುವ ವ್ಯಾತ್ಯಾಸಗಳನ್ನು ಸರಿಪಡಿಸಲಾಗುವುದು ಮತ್ತು ಇಲ್ಲಿ ತಡೆಗೋಡೆ ಕಾಮಗಾರಿಗಳ ಮೇಲೆ ಮಣ್ಣು ಕುಸಿತಕ್ಕೆ ಕಾರಣವಾಗಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದೆಕೊಳ್ಳಲಾಗುವುದು. ಅಧಿಕಾರಿಗಳ ಬೇಜವ್ದಾರಿ ವರ್ತನೆ ಹಾಗೂ ಸಮಸ್ಯೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಗಮನಕ್ಕೆ ತರಲಾಗುವುದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಸಂತೆಕಟ್ಟೆ ಅಂಡರ್‌ಪಾಸ್ ಕಾಮಗಾರಿಯಲ್ಲಿ ಬಂಡೆ ಸಿಕ್ಕಿದ ಕಾರಣ ಅವಧಿ ಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಇಲ್ಲಿ ಮಣ್ಣು ಕುಸಿಯದಂತೆ ಮರಳು ಚೀಲಗಳಿಗೆ ಮಣ್ಣು ತುಂಬಿಸಿ ಅಳವಡಿಸಿ ಯಥಾಸ್ಥಿತಿ ಕಾಪಾಡುವಂತೆ ಕಳೆದ ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ ಎಂದರು.

ವಿರೋಧ ಪಕ್ಷ ನಾಯಕ ಆಯ್ಕೆ ಪ್ರಶ್ನೆಗೆ ಉತ್ತರ ಇಲ್ಲ!

ವಿರೋಧ ಪಕ್ಷದ ನಾಯಕನ ಆಯ್ಕೆ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪೆಚ್ಚು ಮೋರೆ ಹಾಕಿ ಎದ್ದು ಹೊರನಡೆದ ಪ್ರಸಂಗ ನಡೆದಿದೆ.

ಇದಕ್ಕೂ ಮುನ್ನ ಸಚಿವರು, ನಿನ್ನೆ ಬೆಂಗಳೂರಿನಲ್ಲಿ ನಡೆದಿದ್ದ ವಿರೋಧ ಪಕ್ಷಗಳ ಸಭೆ ಕುರಿತು ಮಾತನಾಡಿ, ಟೀಕಿಸಿದರು. ಬಳಿಕ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಕುರಿತೂ ವ್ಯಂಗ್ಯವಾಡಿದರು. ಕಾಂಗ್ರೆಸ್ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸಚಿವರಿಗೆ ವರದಿಗಾರರು, ನಿಮ್ಮ ವಿರೋಧ ಪಕ್ಷದ ನಾಯಕನ ಆಯ್ಕೆ ಯಾಕೆ ಕಗ್ಗಂಟಾಗಿ ಉಳಿದಿದೆ ಎಂದು ಕೇಳಿದಾಗ, ಯಾವುದೇ ಉತ್ತರ ನೀಡದೆ ಕೊಠಡಿಯಿಂದ ಹೊರಹೋದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News