ನ.14: ಕಟಪಾಡಿ ಸಂತ ವಿನ್ಸೆಂಟ್ ಚರ್ಚ್‌ನ ಅಮೃತಮಹೋತ್ಸವ

Update: 2023-11-08 15:20 GMT

ಉಡುಪಿ, ನ.8: ಕಟಪಾಡಿಯ ಸಂತ ವಿನ್ಸೆಂಟ್ ಡಿ ಪಾವ್ಲ್ ಚರ್ಚ್‌ನ ಸ್ಥಾಪನೆಯ ಅಮೃತಮಹೋತ್ಸವ ಕಾರ್ಯಕ್ರಮ ಇದೇ ನ.14ರಂದು ವಿವಿಧ ಗಣ್ಯರು ಹಾಗೂ ಭಕ್ತಾದಿಗಳ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಲಿದೆ ಎಂದು ಚರ್ಚ್‌ನ ಧರ್ಮ ಗುರುಗಳಾದ ವಂ. ರಾಜೇಶ್ ಪಸನ್ನಾ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.14ರಂದು ಬೆಳಗ್ಗೆ 9:30ಕ್ಕೆ ಉಡುಪಿ ಕೆಥೋಲಿಕ್ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರ ನೇತೃತ್ವದಲ್ಲಿ ಕೃತಜ್ಞತಾ ಬಲಿಪೂಜೆ ನಡೆಯಲಿದೆ ಎಂದರು.

ಬಳಿಕ 11:30ಕ್ಕೆ ಸಭಾ ಕಾರ್ಯಕ್ರಮವು ಬಿಷಪ್‌ರ ಅಧ್ಯಕ್ಷತೆಯಲ್ಲಿ ನಡೆಯ ಲಿದ್ದು, ಧರ್ಮಪ್ರಾಂತದ ಶ್ರೇಷ್ಠಗುರು ಮೊನ್ಸಿಂರೆರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಹೋಲಿ ಕ್ರಾಸ್ ಸಭೆ ದಕ್ಷಿಣ ಭಾರತದ ಪ್ರೊವಿನ್ಸಿಯಲ್ ಸುಪಿರೀಯರ್ ಅ.ವಂ. ರೋಕ್ ಡಿಕೊಸ್ತಾ, ಧರ್ಮಪ್ರಾಂತದ ಕುಲಪತಿ ಅ.ವಂ. ಡಾ. ರೋಶನ್ ಡಿಸೋಜಾ, ಉಡುಪಿ ವಲಯ ಪ್ರಧಾನ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್, ಹೋಲಿ ಕ್ರೊಸ್ ಸ್ಟೂಡಂಟ್ ಹೋಮ್ ಕಟಪಾಡಿ ಇದರ ನಿರ್ದೇಶಕ ವಂ. ರೋನ್ಸನ್ ಆರ್ ಡಿಸೋಜಾ ಭಾಗವಹಿಸುವರು.

ಅಲ್ಲದೇ ಮಾಜಿ ಸಚಿವ ವಿನಯ್‌ಕುಮಾರ್ ಸೊರಕೆ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಶೆಟ್ಟಿ, ಕೋಟೆ ಗ್ರಾಪಂ ಅಧ್ಯಕ್ಷೆ ಪ್ರಮೀಳಾ ಜತ್ತನ್ನ, ಚರ್ಚ್ ಸ್ಮರಣ ಸಂಚಿಕೆ ಸಂಪಾದಕಿ ಕ್ಯಾಥರಿನ್ ರೊಡ್ರಿಗಸ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದು ರಾಜೇಶ್ ಪಸನ್ನಾ ತಿಳಿಸಿದರು.

ಅಂದು ಸಂಜೆ 6 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ವಲಯ ಪ್ರಧಾನ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್ ವಹಿಸಲಿದ್ದು, ಹೋಲಿ ಕ್ರಾಸ್ ಸಭೆ ದಕ್ಷಿಣ ಭಾರತದ ಅ.ವಂ.ರೋಕ್ ಡಿಕೊಸ್ತಾ, ವಂ. ರೋನ್ಸನ್ ಆರ್ ಡಿಸೋಜಾ, ಕಟಪಾಡಿ ಕೊಂಕಣ್ಸ್ ಯುಎಇ ಸ್ಥಾಪಕ ಕಾರ್ಯದರ್ಶಿ ಆಗ್ನೆಲ್ ರೊಡ್ರಿಗಸ್, ಬರಹಗಾರ ವಿಜಯ್ ಕುಮಾರ್ ಶೆಟ್ಟಿ ಮುಂಬಯಿ ಭಾಗವಹಿಸುವರು ಎಂದು ತಿಳಿಸಿದರು.

ಅಮೃತಮಹೋತ್ಸವದಲ್ಲಿ ಸರ್ವಧರ್ಮಿಯರ ಸಹಭಾಗಿತ್ವ ಇದ್ದು ನ.10 ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ ಹಾಗೂ 11ರಂದು ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಲಿದೆ.ಸಭಾ ಕಾರ್ಯಕ್ರಮದ ಬಳಿಕ ಚರ್ಚಿನ ಮಕ್ಕಳು ಮತ್ತು ಯುವಕ ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ತುಳು ನಾಟಕ ಪ್ರದರ್ಶನ ನಡೆಯಲಿದೆ.

1948 ಮೇ 16ರಂದು ಕಟಪಾಡಿಯಲ್ಲಿ ಚರ್ಚಿನ ಸ್ಥಾಪನೆಯಾಗಿದ್ದು, ವಂ. ರುಜಾರಿಯೋ ಫೆರ್ನಾಂಡಿಸ್ ಪ್ರಥಮ ಧರ್ಮ ಗುರುಗಳಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ವಂ.ರಾಜೇಶ್ ಪಸನ್ನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತಿದ್ದು ಈವರೆಗೆ 16 ಮಂದಿ ಧರ್ಮಗುರುಗಳು ಇಲ್ಲಿ ಸೇವೆ ಸಲ್ಲಿಸಿದ್ದಾರೆ.

ಅಮೃತಮಹೋತ್ಸವದ ಸವಿನೆನಪಿಗಾಗಿ ವರ್ಷವಿಡೀ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಚರ್ಚ್ ಕಟ್ಟಡದ ದುರಸ್ಥಿ, ನೂತನ ಸ್ವಾಗತ ದ್ವಾರ, ಚರ್ಚ್ ಆವರಣಕ್ಕೆ ಇಂಟರ್‌ಲಾಕ್ ವ್ಯವಸ್ಥೆ ಸಹಿತ ಹಲವಾರು ಕೆಲಸಗಳನ್ನು ಪೂರ್ಣಗೊಳಿಸಲಾಗಿದೆ. ಅಮೃತ ಮಹೋತ್ಸವದ ಪ್ರಯುಕ್ತ ಬಡವರಿಗಾಗಿ ಒಂದು ಮನೆಯನ್ನು ನಿರ್ಮಿಸುವ ಯೋಜನೆ ಇದೆ ಎಂದು ರಾಜೇಶ್ ಪಸನ್ನ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಬ್ರಯಾನ್ ಕೊರೆಯಾ, ಕಾರ್ಯದರ್ಶಿ ತೆರೆಸಾ ಲೋಬೊ, ಸಂಚಾಲಕ ಲುವಿಸ್ ಡಿಸಿಲ್ವಾ, ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯ ಕಿರಣ್ ಲೂವಿಸ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News