ಉಡುಪಿ ನಗರ ಸಭೆ ವ್ಯಾಪ್ತಿಯ ನಿವೇಶನ ರಹಿತರಿಂದ ಅ.6ಕ್ಕೆ ಪೌರಾಯುಕ್ತರಿಗೆ ಮನವಿ ಸಲ್ಲಿಕೆ

Update: 2023-10-03 15:16 GMT

ಉಡುಪಿ, ಅ.3: ಉಡುಪಿ ನಗರಸಭಾ ವ್ಯಾಪ್ತಿಯ ಹೆರ್ಗ ಗ್ರಾಮದ ಸರಕಾರಿ ನಿವೇಶನ ಸ್ಥಳದಲ್ಲಿ ಸರಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಯಡಿ ಸುಮಾರು 240 ಸುಸಜ್ಜಿತ ವಸತಿ ಸಮುಚ್ಛಯ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿ ವರ್ಷ 4 ಕಳೆದರೂ ಅವುಗಳು ಫಲಾನುಭವಿಗಳಿಗೆ ಹಸ್ತಾಂತರವಾಗದೇ ಅವರನ್ನು ಸಂಕಷ್ಟಕ್ಕೆ ಗುರಿ ಮಾಡಿದೆ ಎಂದು ಹೋರಾಟ ಸಮಿತಿಯ ಸಂಚಾಲಕ ವೆಂಕಟೇಶ ಕೋಣಿ ತಿಳಿಸಿದ್ದಾರೆ.

ಫಲಾನುಭವಿಗಳು ತಮ್ಮ ಪಾಲಿನ ಮಾರ್ಜಿನ್ ಹಣ 90,000 ರೂ.ವನ್ನು (ಪರಿಶಿಷ್ಟಜಾತಿ/ಪಂಗಡದವರಿಗೆ 60,000ರೂ) ಪಾಲು ಹಣವಾಗಿ ಸಂಬಂಧಪಟ್ಟ ಇಲಾಖೆಗೆ ಕಟ್ಟಲಾಗಿದೆ. ಬ್ಯಾಂಕ್‌ನ ಸಹಾಯ ಧನದೊಂದಿಗೆ ಸಾಲ ಸೌಲಭ್ಯ ಪಡೆದು ವಸತಿ ಸಮುಚ್ಚಯ ಕಟ್ಟಡಕ್ಕೆ ಹಕ್ಕುಪತ್ರ ಪಡೆಯಲಾಗಿದ್ದರೂ, ವಸತಿ ಸಮುಚ್ಛಯದ ಪಲಾನುಭವಿ ನಿವಾಸಿಗಳು ವಾಸ ಮಾಡಲು ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ.ವಸತಿ ಸಮುಚ್ಛಯ ಅವ್ಯವಸ್ಥೆಗಳ ಆಗರವಾಗಿದೆ ಎಂದವರು ದೂರಿದ್ದಾರೆ.

ವಸತಿ ಸಮುಚ್ಛಯಕ್ಕೆ ಕುಡಿಯುವ ನಳ್ಳಿ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ, ಕಿಟಿಕಿ, ಬಾಗಿಲು ಅಳವಡಿಸಿಲ್ಲ. ಪೈಂಟಿಂಗ್ ಕೆಲಸ ಬಾಕಿ ನಿಂತಿದೆ. ಬ್ಯಾಂಕ್‌ನಿಂದ ಸಹಾಯಧನದೊಂದಿಗೆ ಸಾಲ ಮಂಜೂರಾಗದ ಕೆಲವು ನಿವೇಶನ ರಹಿತ ಅರ್ಜಿದಾರರಿಗೆ ಈ ಕೂಡಲೇ ಸಾಲ ಸೌಲಭ್ಯ ಮಂಜೂರು ಮಾಡಬೇಕು. ಇಲ್ಲಿಗೆ ಪಕ್ಕಾ ರಸ್ತೆ ನಿರ್ಮಾಣಗೊಳ್ಳ ಬೇಕು, ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಕೊಳ್ಳಬೇಕು ಮುಂತಾದ ಫಲಾನುಭವಿಗಳ ಬೇಡಿಕೆಗಳನ್ನು ಈಡೇರಿಸು ವಂತೆ ಒತ್ತಾಯಿಸಿ ಬೀದಿಗಿಳಿದು ಹೋರಾಟ ನಡೆಸಲು ಉಡುಪಿ ನಗರಸಭಾ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಸಿದ್ಧತೆ ನಡೆಸಿದೆ ಎಂದು ಸಮಿತಿಯ ಸಂಚಾಲಕ ವೆಂಕಟೇಶ ಕೋಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿವೇಶನ ರಹಿತರ ಸಮಸ್ಯೆಗಳ ಪರಿಹಾರಕ್ಕಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜರುಗಿದ ಜನ ಸಂಪರ್ಕ ಸಭೆಯಲ್ಲಿ ಮನವಿ ಸಲ್ಲಿಸಿದ್ದರೂ ಈ ತನಕ ಯಾವುದೇ ಸ್ಪಂದನೆ ವ್ಯಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಹೆರ್ಗದ ವಸತಿ ಸಮುಚ್ಛಯ ವಠಾರದಲ್ಲಿ ನಿವೇಶನ ರಹಿತ ಫಲಾನುಭವಿಗಳ ಸಭೆ ನಡೆದು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅ.6ರಂದು ಉಡುಪಿ ನಗರಸಭೆ ಪೌರಾಯುಕ್ತರಿಗೆ ಹಕ್ಕೊತ್ತಾಯದ ಸಾಮೂಹಿಕ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ವೆಂಕಟೇಶ ಕೋಣಿ ತಿಳಿಸಿದ್ದಾರೆ.

ಇದೇ ವೇಳೆ ನಿವೇಶನ ರಹಿತರ ಹೋರಾಟ ಸಮಿತಿಗೆ ಚನ್ನಪ್ಪ, ವೆಂಕಟೇಶ ಕೋಣಿ, ಸಂತೋಷ, ಸಂದೇಶ, ರಾಜಶೇಖರ, ಮಹಾವೀರ, ಸರಸ್ವತಿ, ಸೊನಾಲಿ, ನಾಗೇಶ ಪಿ.ಶೇಟ್, ವಿಶ್ವನಾಥ, ರಾಘವೇಂದ್ರ ಪಿ.ಶೇಟ್, ಕುಬೇರ, ಲಲಿತ ಗಂಗಯ್ಯ ಇವರನ್ನೊಳಗೊಂಡ 13 ಸದಸ್ಯರ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News