ಮಾಲಿನ್ಯ ನಿಯಂತ್ರಣ ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ: ಉಡುಪಿ ಸಿ.ಇ.ಓ
ಉಡುಪಿ, ನ.10: ಮಾಲಿನ್ಯ ನಿಯಂತ್ರಣ ಮಾಡುವುದರೊಂದಿಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಹೇಳಿದ್ದಾರೆ.
ಮಣಿಪಾಲದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಇಂದು ನಡೆದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ವಾಯು ಗುಣಮಟ್ಟ ಉತ್ತಮವಾಗಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಪರಿಸರದಲ್ಲಿರುವ ಗಿಡ-ಮರಗಳಾಗಿವೆ. ಇವುಗಳನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ. ನಾನು ಈ ಹಿಂದೆ ಹೊಸದಿಲ್ಲಿ ಯಲ್ಲಿ ಕಾರ್ಯನಿರ್ವಹಿಸುವಾಗ ಅಲ್ಲಿನ ವಾಯು ಮಾಲಿನ್ಯ ಎಷ್ಟಿತ್ತೆಂದರೆ ಮನೆಯಿಂದ ಹೊರಗೆ ಬಂದರೆ ಕಣ್ಣುರಿ ಉಂಟಾ ಗುತ್ತಿತ್ತು. ಕೆಲವರಿಗೆ ಉಸಿರಾಡಲು ತೊಂದರೆಯಾಗುತ್ತಿತ್ತು. ಇದಕ್ಕೆಲ್ಲಾ ಕಾರಣ ವಾಹನಗಳು ಹೊರಸೂಸುವ ಹೊಗೆ ಹಾಗೂ ನೆರೆಯ ಪಂಜಾಬ್ ಹಾಗೂ ಹರಿಯಾಣದಲ್ಲಿ ಕೊಳೆ ಸುಡುವ ಪರಿಪಾಠ ಎಂದರು.
ಕಳೆದ ಜೂನ್ ತಿಂಗಳಲ್ಲಿ ಸರಕಾರ ಒಂದು ಕೋಟಿಗೂ ಹೆಚ್ಚು ಗಿಡ- ಮರಗಳನ್ನು ನೆಟ್ಟಿದೆ. ಇದು ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ. ಗಿಡ-ಮರಗಳ ಬೆಳೆಸುವುದರಿಂದ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಾಯು ಮಾಲಿನ್ಯ ಹಾಗೂ ಪರಿಸರ ಮಾಲಿನ್ಯಕ್ಕೆ ಶಿಕ್ಷಿತರು ಹಾಗೂ ಶ್ರೀಮಂತರೇ ಮುಖ್ಯ ಕಾರಣ. ಬಡಗುಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣಿಪಾಲದ ಕೆಲವು ಶಿಕ್ಷಿತರು ತಮ್ಮ ಮನೆಯ ಕಸವನ್ನು ಕಸ ಸಂಗ್ರಹಣಾಗಾರರಿಗೆ ನೀಡದೇ, ಕಸವನ್ನು ಸುಡುತ್ತಿರುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಕೆಲವು ಶ್ರೀಮಂತರು ಬೆಳಗಿನ ವಾಯುವಿಹಾರಕ್ಕೆ ಜಿಲ್ಲಾ ಆಟದ ಮೈದಾನಕ್ಕೆ ವಾಹನಗಳಲ್ಲಿ ಬಂದು ಅಲ್ಲಿನ ಜಿಮ್‌ನಲ್ಲಿ ಥ್ರೆಡ್‌ಮಿಲ್‌ಗಳನ್ನು ಬಳಸುತ್ತಾರೆ. ವಾಹನಗಳಲ್ಲಿ ಬರುವ ಬದಲು ಅವರು ಮನೆಯಿಂದಲೇ ನಡೆದು ಬಂದರೆ ವಾಹನದಿಂದ ಹೊರಸೂಸುವ ಹೊಗೆ ಯನ್ನು ನಿಯಂತ್ರಿಸಿ, ಮಾಲಿನ್ಯ ಕಡಿಮೆಗೊಳಿಸಬಹುದು ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಬಿ ಮಾತನಾಡಿ, ಇತ್ತೀಚೆಗೆ ವಾಯು ಮಾಲಿನ್ಯದಿಂದ ಹವಾಮಾನ ಬದಲಾವಣೆ ಸೇರಿದಂತೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದರ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಮುಂದಾಗುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ. ರವಿಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ದೆಹಲಿಯ ವಾಯು ಮಾಲಿನ್ಯ ಸೂಚ್ಯಂಕವು 400ರ ಗಡಿ ದಾಟಿದ್ದು, ಗಂಭೀರ ಸ್ಥಿತಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೀಗಾಗದಂತೆ ಜಾಗೃತರಾಗುವುದು ಅತಿಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ದಂತ ವೈದ್ಯ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಡುಪಿ ಘಟಕದ ಮುಖ್ಯಸ್ಥ ಡಾ.ವಿಜಯೇಂದ್ರ, ಕರಾವಳಿ ಬಸ್ಸು ಮಾಲಕರ ಸಂಘದ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಭಟ್, ಕೆಎಸ್‌ಆರ್‌ಟಿಸಿ ಉಡುಪಿ ವಿಭಾಗ ಘಟಕದ ವ್ಯವಸ್ಥಾಪಕ ಶಿವರಾಮ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಶಾಂತರಾಜು ಸ್ವಾಗತಿಸಿ, ವಾಹನ ನಿರೀಕ್ಷಕ ಸಂತೋಷ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸರಸ್ವತಿ ವಂದಿಸಿದರು.