ಉಡುಪಿ ಜಿಲ್ಲೆಯಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

Update: 2024-08-26 15:27 GMT

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಇಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಮುದ್ದುಕೃಷ್ಣ, ಬಾಲಕೃಷ್ಣ, ಕಿಶೋರ ಕೃಷ್ಣ ಸ್ಪರ್ಧೆಗಳನ್ನು ಕ್ರಮವಾಗಿ ರಾಜಾಂಗಣ, ಪುತ್ತಿಗೆ ಮಠ, ಗೀತಾ ಮಂದಿರದಲ್ಲಿ ಆಯೋಜಿಸ ಲಾಗಿತ್ತು. ಈ ಸ್ಪರ್ಧೆಯಲ್ಲಿ ನೂರಾರು ಸಂಖ್ಯೆಯ ಮಕ್ಕಳು ಪಾಲ್ಗೊಂಡಿದ್ದರು.

ಶ್ರೀಕೃಷ್ಣಾ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಪೋಷಕರು ಮಕ್ಕಳಿಗೆ ಕೃಷ್ಣ ವೇಷ ತೊಡಿಸಿರುವುದು ಕಂಡುಬಂತು. ಈ ಮೂಲಕ ಎಲ್ಲೆಡೆ ಮುದ್ದುಕೃಷ್ಣರ ತುಂಟಾಟ ಕಣ್ಮನ ಸೆಳೆಯಿತು. ಸ್ಪರ್ಧೆ ಹೊರತಾಗಿಯೂ ಪೋಷಕರು ಹರಕೆ ರೂಪದಲ್ಲಿ ತಮ್ಮ ಮಕ್ಕಳಿಗೆ ಕೃಷ್ಣವೇಷ ಧರಿಸಿ ಮಠಕ್ಕೆ ಆಗಮಿಸಿದ ಶ್ರೀಕೃಷ್ಣ ದೇವರ ದರ್ಶನ ಪಡೆದರು.

ಶ್ರೀಕೃಷ್ಣನ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಶ್ರೀಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿ ಉತ್ಸವ ಹಿನ್ನೆಲೆಯಲ್ಲಿ ಸೋಮವಾರ ರಥಬೀದಿ ಜನ ಜಾತ್ರೆಯೇ ನೆರೆದಿತ್ತು. ನಗರದ ಹಲವು ರಸ್ತೆಗಳಲ್ಲಿ ಜನ ಹಾಗೂ ವಾಹನಗಳ ಓಡಾಟ ಹೆಚ್ಚಿದ್ದು, ಹಲವು ಕಡೆ ಟ್ರಾಫಿಕ್ ಜಾಮ್ ಕಿರಿಕಿರಿ ಅನುಭವಿಸುವಂತಾಯಿತು.

ಹುಲಿವೇಷಗಳ ಅಬ್ಬರ: ನಗರದಾದ್ಯಂತ ವಿವಿಧ ವೇಷಧಾರಿಗಳು ಗಮನ ಸೆಳೆದಿದ್ದು, ಸಣ್ಣ ಮಕ್ಕಳಿಂದ ದೊಡ್ಡವರವರೆಗೂ ವಿವಿಧ ವೇಷಗಳನ್ನು ತೊಟ್ಟು ಸುತ್ತಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಣ್ಣ ಮಕ್ಕಳು ಪೇಪರ್ ವೇಷ, ದೊಡ್ಡವರ ರಾಕ್ಷಸ ವೇಷ, ಕರಡಿ, ಗೊಂಬೆ, ಕುಲೆ(ದೆವ್ವ) ವೇಷಗಳು ಗಮನ ಸೆಳೆದವು. ನಗರದಲ್ಲಿ ಮಹಿಳಾ ಹುಲಿಗಳ ಘರ್ಜನೆ ವಿಶೇಷವಾಗಿತ್ತು. ದರ್ಪಣ ಮಹಿಳಾ ಪಿಲಿ ತಂಡದ ಸದಸ್ಯರು ಹುಲಿ ವೇಷಧರಿಸಿ ಹಲವೆಡೆ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದರು. ಈ ತಂಡವು ಎರಡನೇ ಭಾರಿ ಹುಲಿ ವೇಷ ಧರಿಸಿದ್ದು, 35ಕ್ಕೂ ಅಧಿಕ ಮಂದಿ ಯುವತಿ ಯರು, ಮಹಿಳೆಯರು ಹುಲಿ ವೇಷ ಧರಿಸಿದ್ದರು.

ವಿವಿಧ ಅಂಗಡಿಮುಗ್ಗಟ್ಟುಗಳ ಮುಂದೆ ಹುಲಿವೇಷಧಾರಿಗಳ ತಂಡ ಪ್ರದರ್ಶನ ನೀಡಿದ್ದು, ಇದರೊಂದಿಗೆ ಸಾರ್ವಜನಿಕರು, ಮಕ್ಕಳು, ವಿದ್ಯಾರ್ಥಿನಿ ಯರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಇಂತಹ ಹಲವು ವಿಡಿಯೋ ಗಳು ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಆಗುತ್ತಿದೆ.

ಮಳೆಯಿಂದ ಅಡ್ಡಿ: ರಾಜ್ಯದ ವಿವಿಧ ಭಾಗಗಳಿಂದ ಸಾಕಷ್ಟು ವ್ಯಾಪಾರಿ ಗಳು ಉಡುಪಿಗೆ ಆಗಮಿಸಿದ್ದು, ಹೂವು, ಮಕ್ಕಳ ಆಟಿಕೆ, ಆಲಂಕಾರಿಕ ಸಾಮಾಗ್ರಿ ಸಹಿತ ವಿವಿಧ ವಸ್ತುಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿರು ಬಿಸಿಲಿನಿಂದ ಜನರ ಬೆವರಿಳಿಸಿದರೆ, ಸಂಜೆಯಾಗುತ್ತಲೇ ಮಳೆಯ ಅಬ್ಬರ ಜೋರಾಗಿತ್ತು. ಇದರಿಂದ ವ್ಯಾಪಾರಿಗಳು ಭಕ್ತರು ತುಂಬಾ ತೊಂದರೆ ಅನುಭವಿಸುವಂತಾಯಿತು. ವ್ಯಾಪಾರಿಗಳ ಹಲವು ಸೊತ್ತುಗಳು ನೀರಿನಲ್ಲಿ ತೊಯ್ದು ಹೋಗಿ ನಷ್ಟ ಅನುಭವಿಸುವಂತಾಯಿತು.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News