ಉಡುಪಿ: ನುಲಿಯ ಚಂದಯ್ಯ ಜಯಂತಿ ಆಚರಣೆ

Update: 2023-09-01 16:20 GMT

ಉಡುಪಿ, ಸೆ.1: ವಚನಗಳು ಸಾಮಾನ್ಯ ಜನರ ನಾಡಿಮಿಡಿತಗಳಾಗಿ, ವೈಚಾರಿಕ ಮತ್ತು ವೈಜ್ಞಾನಿಕ ಮನೋ ಚಿಂತನೆಗೆ ತಮ್ಮ ಕಾಯಕದ ಮೂಲಕ ಮಹತ್ವವನ್ನು ನೀಡಿದವರು ಶಿವಶರಣರು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಶ್ರೀನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಚಂದಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

12ನೇ ಶತಮಾನದ ಕಾಲದಲ್ಲಿ ಭಾಷೆಯಲ್ಲಿ ಸಾಕಷ್ಟ್ಟು ಬದಲಾವಣೆ ಗಳಾಗಿವೆ. ನಮ್ಮಲ್ಲಿರುವ ಮೂಢನಂಬಿಕೆಗಳಿಗೆ ಜೋತು ಬೀಳದೆ ಆಧುನಿಕ ಭಾರತದ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಬೇಕು. ಕಾಯಕ ನಿಷ್ಠೆಯಲ್ಲಿ ನುಲಿಯ ಚಂದಯ್ಯ ರಂತಹ ಶರಣರ ತತ್ವ ಸಿದ್ದಾಂತಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಮಾತನಾಡಿ, ಕಾಯಕದಲ್ಲಿ ಕೈಲಾಸ ಕಂಡ ಮಹಾನ್ ಶರಣರು ನುಲಿಯ ಚಂದಯ್ಯ ಅವರು. ಲಿಂಗ ನಿಷ್ಠೆಗಿಂತ ಕಾಯಕ ನಿಷ್ಠೆ ಮೇಲು ಎಂದು ಅವರು ಸಾರಿದ್ದಾರೆ. ತನು ಮನ ಧನದಿಂದ ವಚನ ಸಾಹಿತ್ಯಕ್ಕೆ ಶ್ರಮಿಸಿದ್ದಾರೆ ಎಂದರು.

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಉಪನ್ಯಾಸಕಿ ಡಾ.ಪ್ರಜ್ಞಾ ಮಾರ್ಪಳ್ಳಿ ನುಲಿಯ ಚಂದಯ್ಯ ಅವರ ಕುರಿತು ಉಪನ್ಯಾಸ ನೀಡಿ, ಕಲೆ, ಸಾಹಿತ್ಯ, ವೈಧ್ಯಮಯ ಸಂಸ್ಕೃತಿ ಹೊಂದಿರುವ ನಮ್ಮ ದೇಶ ಹಾಗೂ ರಾಜ್ಯದಲ್ಲಿ ವಿವಿಧತೆಯಲ್ಲಿ ಏಕತೆ ಯನ್ನು ಕಾಣುತ್ತಿದ್ದೇವೆ. ಬಸವಣ್ಣ ಸೇರಿದಂತೆ ಅನೇಕ ಶಿವಶರಣರು ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಅನುಭವ ಮಂಟಪದಲ್ಲಿದ್ದ ಶ್ರೇಷ್ಠ ಶರಣರಲ್ಲಿ ನುಲಿಯ ಚಂದಯ್ಯ ಒಬ್ಬರು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ನರಸಿಂಹಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಉಪನ್ಯಾಸಕ ರಾಮಾಂಜಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News