ಉಡುಪಿ: ಸೆ.23ರಂದು ಪಾವಂಜೆ ಗುರುರಾಯರ 75ನೇ ಪುಣ್ಯದಿನ ಸಂಸ್ಮರಣೆ
ಉಡುಪಿ, ಸೆ.21: ಕಳೆದ ಶತಮಾನದ ಪ್ರಾರಂಭದಲ್ಲಿ ತಮ್ಮ ವಿಶಿಷ್ಟ ಸಾಹಿತ್ಯ ಸೇವೆಯ ಮೂಲಕ ಕನ್ನಡ ಸಾಹಿತ್ಯ ಭಂಡಾರವನ್ನು ಶ್ರೀಮಂತ ಗೊಳಿಸಿದ ಪಾವಂಜೆ ಗುರುರಾಯರ 75ನೇ ಪುಣ್ಯದಿನದ ಸಂಸ್ಮರಣಾ ಕಾರ್ಯಕ್ರಮ ಸೆ.23ರ ಶನಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಜೆ 4:00ಗಂಟೆಗೆ ನಡೆಯಲಿದೆ ಎಂದು ಸುಬೋಧ್ ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಾವಂಜೆ ಗುರುರಾಯರು (1869-1948) ದುರ್ಲಭವಾಗಿದ್ದ ಶಾಸ್ತ್ರ ಗ್ರಂಥಗಳನ್ನು, ಸ್ತೋತ್ರ ಸಾಹಿತ್ಯವನ್ನು, ಜನಪದ ಸಾಹಿತ್ಯವೆಂದು ತಿರಸ್ಕಾರಕ್ಕೊಳಗಾಗಿದ್ದ ಯಕ್ಷಗಾನ ಪ್ರಸಂಗ ಹಾಗೂ ಹೆಣ್ಣುಮಕ್ಕಳ ಹಾಡುಗ ಳೊಂದಿಗೆ ದಾಸ ಸಾಹಿತ್ಯ ವನ್ನು ಶ್ರಮವಹಿಸಿ ಸಂಗ್ರಹಿಸಿ, ಸಂಶೋಧಿಸಿ, ಅಚ್ಚು ಹಾಕಿಸಿ, ಪ್ರಕಟಿಸಿ ಪ್ರಚಾರ ಮಾಡಿದ್ದರು ಎಂದವರು ತಿಳಿಸಿದರು.
ಅವರು ಉಡುಪಿಯಲ್ಲಿ ಸ್ಥಾಪಿಸಿದ ಶ್ರೀಕೃಷ್ಣ ಮುದ್ರಣಾಲಯದಲ್ಲಿ ತಮ್ಮ ಪುಸ್ತಕಗಳನ್ನು ಮುದ್ರಿಸಿ ಮಾರಾಟ ಮಾಡುತಿದ್ದರು. ಅವರು ಸುಮಾರು 500ಕ್ಕೂ ಹೆಚ್ಚು ಪುಸ್ತಕಗಳನ್ನು ಮುದ್ರಿಸಿ ಪ್ರಕಾಶನಗೊಳಿಸಿದ್ದರು ಎಂದರು.
ಕಾರ್ಯಕ್ರಮದಲ್ಲಿ ಪಾವಂಜೆ ಗುರುರಾಯರ ಕುರಿತ ಪುಸ್ತಕ ಬಿಡುಗಡೆಗೊಳ್ಳಲಿದೆ. ಬಹುಶ್ರುತ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ, ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಬಳಿಕ ಶಾಸ್ತ್ರೀಯ ಗಾಯನ, ಭರತನಾಟ್ಯ ಹಾಗೂ ಯಕ್ಷಗಾನ ಪ್ರದರ್ಶನವಿರುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಾವಂಜೆ ಅವರ ಮೊಮ್ಮಗ ಗುರುಪ್ರಸಾದ್ ಪಾವಂಜೆ ಹಾಗೂ ಹರೀಶ್ ಪೇಜಾವರ ಉಪಸ್ಥಿತರಿದ್ದರು.