ಉಡುಪಿ: ಯಕ್ಷ ಶಿಕ್ಷಣ ಗುರುಗಳ ಸಮಾವೇಶ
ಉಡುಪಿ, ಆ.17: 2007ರಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ ಯಕ್ಷಗಾನವನ್ನು ಕಲಿಸುವ ಉದ್ದೇಶದಿಂದ ಹುಟ್ಟಿಕೊಂಡ ಯಕ್ಷಶಿಕ್ಷಣ ಟ್ರಸ್ಟ್ ಇದೀಗ ಕಾಪು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೂ ವಿಸ್ತರಣೆ ಗೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಎಲ್ಲಾ ಯಕ್ಷ ಗುರುಗಳ ಸಮಾವೇಶ ಬುದವಾರ ಪೇಜಾವರ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ ನಡೆಯಿತು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 40ಕ್ಕೂ ಅಧಿಕ ಪ್ರೌಢ ಶಾಲೆಗಳಲ್ಲಿ ಯಕ್ಷ ಶಿಕ್ಷಣ ತರಬೇತಿ ಈಗಾಗಲೇ ನೀಡಲಾಗುತ್ತಿದ್ದರೆ, ಈ ವರ್ಷದಿಂದ ಕಾಪು ಕ್ಷೇತ್ರದ 15 ಹಾಗೂ ಕುಂದಾಪುರ ಕ್ಷೇತ್ರದ 13 ಶಾಲೆಗಳಲ್ಲಿ ಯಕ್ಷಗಾನ ತರಬೇತಿಯನ್ನು ವಿದ್ಯಾರ್ಥಿಗಳು ಪಡೆಯುತಿದ್ದಾರೆ.
ಹೀಗಾಗಿ ಯಕ್ಷಶಿಕ್ಷಣ ಅಭಿಯಾನ ಒಟ್ಟು 69 ಪ್ರೌಡ ಶಾಲೆಗಳಿಗೆ ವಿಸ್ತರಣೆಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 31 ಮಂದಿ ಗುರುಗಳು ಈ ಶಾಲೆಗಳ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಯಕ್ಷಗಾನ ತರಬೇತಿಯನ್ನು ನೀಡುತಿದ್ದಾರೆ.
ಯಕ್ಷ ಶಿಕ್ಷಣ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷರೂ ಮಾಜಿ ಶಾಸಕರೂ ಆದ ಕೆ.ರಘುಪತಿ ಭಟ್ ಈ ಸಂದರ್ಭದಲ್ಲಿ ಮಾತನಾಡಿ, ಈ ಒಂದು ಕಲಾ- ಶೈಕ್ಷಣಿಕ ಅಭಿಯಾನಕ್ಕೆ ಜಿಲ್ಲೆಯ ಇತರ ಶಾಸಕರು ಆಸಕ್ತಿ ವಹಿಸಿರುವುದು ತನಗೆ ಧನ್ಯತೆಯನ್ನು ನೀಡಿದೆ. ಇದಕ್ಕೆ ಯಕ್ಷಗಾನ ಕಲಾರಂಗ ಮತ್ತು ಯಕ್ಷ ಗುರುಗಳ ನಿಸ್ಪೃಹ ಸೇವೆಯೆ ಕಾರಣವೆಂದು ಸಂತಸ ವ್ಯಕ್ತಪಡಿಸಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ತಮ್ಮ ಕ್ಷೇತ್ರಕ್ಕೂ ಅಭಿಯಾನವನ್ನು ವಿಸ್ತರಿಸಿದ್ದಕ್ಕೆ ಟ್ರಸ್ಟ್‌ಗೆ ಅಭಿನಂದನೆ ಸಲ್ಲಿಸಿದರು.
ಗುರುಗಳನ್ನು ಪರಿಚಯಿಸಿದ ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್, ಕಾಪು ಮತ್ತು ಕುಂದಾಪುರದ ಇನ್ನಷ್ಟು ಶಾಲೆಗಳು ಬೇಡಿಕೆಯನ್ನಿಟ್ಟಿದ್ದು ಗುರುಗಳ ಕೊರತೆಯಿಂದ ಈ ವರ್ಷ ಅಸಾಧ್ಯವಾಗಿದೆ, ಬೈಂದೂರು ಶಾಸಕರೂ ತಮ್ಮ ಕ್ಷೇತ್ರದಲ್ಲೂ ಮುಂದಿನ ವರ್ಷ ಯಕ್ಷಶಿಕ್ಷಣ ಆರಂಭಿಸುವಂತೆ ಮನವಿ ಮಾಡಿದ್ದಾರೆ ಎಂದರು.
ಅಲ್ಲದೇ ದಕ್ಷಿಣಕನ್ನಡ ಜಿಲ್ಲೆಯಲ್ಲಿಯೂ ಭಾಗವತ ಪಟ್ಲ ಸತೀಶ ಶೆಟ್ಟಿಯವರ ನೇತೃತ್ವದಲ್ಲಿ ಸುಮಾರು 30 ಶಾಲೆಗಳಲ್ಲಿ ಯಕ್ಷಧ್ರುವ ಯಕ್ಷಶಿಕ್ಷಣ ಆರಂಭಗೊಂಡಿರುವುದು ಇದರ ಯಶಸ್ಸಿನ ದ್ಯೋತಕವಾಗಿದೆ ಎಂದು ಮುರಳಿ ಕಡೆಕಾರ್ ನುಡಿದರು.
ಎಲ್ಲಾ ಗುರುಗಳ ಪರವಾಗಿ ಹಿರಿಯರಾದ ಸದಾನಂದ ಐತಾಳರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಯಕ್ಷಗಾನ ಕಲಾ ರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಯಕ್ಷಗಾನ ಕಲಾ ರಂಗದ ಉಪಾಧ್ಯಕ್ಷರಾದ ಎಸ್.ವಿ.ಭಟ್, ವಿ.ಜಿ.ಶೆಟ್ಟಿ ಹಾಗೂ ಟ್ರಸ್ಟ್‌ನ ಸದಸ್ಯರು ಮತ್ತು ಯಕ್ಷಗಾನ ಕಲಾರಂಗದ ಸದಸ್ಯರು ಉಪಸ್ಥಿತರಿದ್ದರು.