ಉಡುಪಿ: ಡಿಜಿಟಲ್ ಗ್ರಂಥಾಲಯ ಮಾಹಿತಿ ಕಾರ್ಯಾಗಾರ
ಉಡುಪಿ: ಅಜ್ಜರಕಾಡಿನ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಡಿಜಿಟಲ್ ಗ್ರಂಥಾಲಯ ಮಾಹಿತಿ ಕಾರ್ಯಾಗಾರ ಶನಿವಾರ ನಡೆಯಿತು.
ಉಡುಪಿ ನಗರ ಸಭೆ ಮತ್ತು ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಂಥಾಲಯದ ಆವರಣದಲ್ಲಿ ಮಲಬಾರ್ ಗೋಲ್ಡ್ ವತಿಯಿಂದ ಉಚಿತವಾಗಿ ನೀಡಿದ ವಿವಿದ ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇಡೀ ಉಡುಪಿ ಜಿಲ್ಲೆಗೆ ಮಾದರಿಯಾದ ಈ ಗ್ರಂಥಾಲಯದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಡಿಜಿಟಲ್ ಗ್ರಂಥಾಲಯ ಕಾರ್ಯಾಗಾರವನ್ನು ಬಳಸಿಕೊಂಡು ಇ-ಗ್ರಂಥಾಲಯದ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮಲಬಾರ್ ಗೋಲ್ಡ್‌ನ ವ್ಯವಸ್ಥಾಪಕ ರಾಘವೇಂದ್ರ ನಾಯಕ್ ಮಾತನಾಡಿ, ಪುಸ್ತಕ ಓದುವ ಜ್ಞಾನದೇಗುಲವೆಂದರೆ ಅದು ಗ್ರಂಥಾಲಯ. ಈ ಗ್ರಂಥಾಲಯದ ಅಂದವನ್ನು ಇನ್ನೂ ಹೆಚ್ಚಿಸಲು ಗ್ರಂಥಾಲಯದ ಆವರಣದಲ್ಲಿ ಉತ್ತಮ ಸಸಿಗಳನ್ನು ನೆಡಬೇಕು ಮತ್ತು ಗ್ರಂಥಾಲಯದಲ್ಲಿ ಶುದ್ಧವಾದ ವಾತಾವರಣವನ್ನು ಕಲ್ಪಿಸಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಶಿಕ್ಷಣ ಫೌಂಡೇಷನ್‌ನ ಜಿಲ್ಲಾ ಸಂಯೋಜಕಿ ರೀನಾ ಎಸ್. ಹೆಗ್ಡೆ ಮಾತನಾಡಿ ಗ್ರಂಥಾಲಯವು ಜ್ಞಾನದೇಗುಲ ಮಾತ್ರ ವಲ್ಲ, ಮನುಷ್ಯನ ಮನಸ್ಸನ್ನು ಸದೃಢಮಾಡುವ ಭಂಡಾರವಿದ್ದಂತೆ ಎಂದರು.
ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಗಿರಿಜಾ ಹೆಗ್ಡೆ ಗಾಂವ್‌ಕರ್ ಮಾತನಾಡಿದರೆ, ವಿದ್ಯಾರ್ಥಿನಿ ಸಾರಾ ಗ್ರಂಥಾಲಯಕ್ಕೆ ಭೇಟಿ ನೀಡಿದ ಅನುಭವ ಹಂಚಿಕೊಂಡರು.ವಿದ್ಯಾರ್ಥಿನಿ ವಿಜೇತ ತನ್ನ ಸಂಗ್ರಹದ ಪುಸ್ತಕಗಳನ್ನು ಮುಖ್ಯ ಗ್ರಂಥಾಲಯಾಧಿಕಾರಿಗಳ ಮೂಲಕ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಪೌಂಡೇಶನ್‌ನ ಕುಂದಾಪುರ ತಾಲೂಕಿನ ಸಂಯೋಜಕಿ ವಿನುತಾ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಯಶ್ರೀ ಯಂ. ಉಪಸ್ಥಿತರಿದ್ದರು.
ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ದರು. ಗ್ರಂಥಪಾಲಕಿ ರಂಜಿತ ಸಿ., ಡಿಜಿಟಲ್ ಗ್ರಂಥಾಲಯದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿ ಕೊಟ್ಟರು. ಗ್ರಂಥಾಲಯ ಸಹಾಯಕಿ ಸುನೀತಾ ಬಿ.ಎಸ್. ವಂದಿಸಿದರು. ಶಕುಂತಳಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.