ಉಡುಪಿ ಜಿಲ್ಲೆ: ಆಗಸ್ಟ್ ತಿಂಗಳಲ್ಲಿ ಶೇ.16ರಷ್ಟು ಮಳೆ ಕೊರತೆ
ಉಡುಪಿ, ಸೆ.2: ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಸುರಿದ ಶೇ.41ರಷ್ಟು ಅಧಿಕ ಮಳೆ ಜೂನ್ ಮತ್ತು ಆಗಸ್ಟ್ ತಿಂಗಳಲ್ಲಿ ಉಂಟಾಗಿರುವ ಮಳೆಯ ಕೊರತೆಯನ್ನು ತುಂಬಿಸುವ ಎಲ್ಲಾ ಸಾಧ್ಯತೆ ಕಂಡುಬರುತ್ತಿದೆ. ಹೀಗಾಗಿ ಈ ಬಾರಿ ಮಳೆಗಾಲದ ಮೂರು ತಿಂಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಶೇ.7 ಹಾಗೂ ಇಡೀ ವರ್ಷದ ಮಳೆಯನ್ನು ತೆಗೆದುಕೊಂಡರೆ ಶೇ.10ರಷ್ಟು ಅಧಿಕ ಮಳೆ ಸುರಿದ ದಾಖಲೆ ಬರೆದಿದೆ.
ಈ ಬಾರಿ ವಾಡಿಕೆ ಮಳೆಗಿಂತ ಅಧಿಕ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ನುಡಿದ ಭವಿಷ್ಯ ಈ ಬಾರಿ ನಿಜವಾಗುವ ಲಕ್ಷಣವಿದೆ. ಅದರ ಭವಿಷ್ಯ ಉಡುಪಿ ಜಿಲ್ಲೆಯ ಮಟ್ಟಿಗಂತೂ ಮಳೆಗಾಲದ ಮೂರನೇ ತಿಂಗಳ ಕೊನೆಗೆ ನಿಜವಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿಯಂತೆ ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಶೇ.16ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ. ಆಗಸ್ಟ್ ತಿಂಗಳ ವಾಡಿಕೆ ಮಳೆ 1064 ಮಿ.ಮೀ. ಆಗಿದ್ದರೆ, ಈ ಬಾರಿ ಇಡೀ ತಿಂಗಳಲ್ಲಿ ಬಿದ್ದಿರುವ ಒಟ್ಟು ಮಳೆಯ ಪ್ರಮಾಣ 895 ಮಿ.ಮೀ. ಮಾತ್ರ. ಹೀಗಾಗಿ ಮಳೆಯ ಒಟ್ಟು ಪ್ರಮಾಣ ದಲ್ಲಿ ಶೇ.16ರಷ್ಟು ಕೊರತೆಯಾಗಿದೆ ಎಂದು ಕೇಂದ್ರದ ಮಾಹಿತಿ ತಿಳಿಸಿದೆ.
ಆದರೆ ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಶೇ.41ರಷ್ಟು ಅಧಿಕ ಮಳೆ ಸುರಿದಿತ್ತು. ಜುಲೈ ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಮಳೆ 1448 ಮಿ.ಮೀ. ಆಗಿದ್ದರೆ ಈ ಬಾರಿ 2047 ಮಿ.ಮೀ. ಮಳೆಯಾಗುವ ಮೂಲಕ ಶೇ.41ರಷ್ಟು ಅಧಿಕ ಮಳೆ ಸುರಿದಿತ್ತು.
ಮಳೆಗಾಲದಲ್ಲಿ ಶೇ.7 ಅಧಿಕ: ಆದರೆ ಮಳೆಗಾಲದ ಮೂರು ತಿಂಗಳ (ಜೂನ್1ರಿಂದ ಆ.31) ಅವಧಿಯಲ್ಲಿ ಬಿದ್ದ ಮಳೆ ಯನ್ನು ಪರಿಗಣನೆಗೆ ತೆಗೆದುಕೊಂಡರೆ ಅಲ್ಲಿ ಶೇ.7ರಷ್ಟು ಅಧಿಕ ಮಳೆಯಾಗಿರುವುದು ಕಂಡುಬಂದಿದೆ. ಈ ಅವಧಿಯ ವಾಡಿಕೆ ಮಳೆ 3655ಮಿ.ಮೀ. ಆಗಿದ್ದರೆ ಈ ಬಾರಿ 3921 ಮಿ.ಮೀ. ಮಳೆಯಾಗಿದೆ.
ಅಲ್ಲದೇ ಈ ವರ್ಷದ ಜನವರಿ 1ರಿಂದ ಆಗಸ್ಟ್ 31ರ ಅವಧಿಯಲ್ಲಿ ಬಿದ್ದ ಮಳೆಯ ಲೆಕ್ಕವನ್ನು ನೋಡಿದರೂ ಶೇ.10ರಷ್ಟು ಹೆಚ್ಚುವರಿ ಮಳೆ ಬಿದ್ದಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಬೀಳಬೇಕಿದ್ದ ವಾಡಿಕೆ ಮಳೆ 3856ಮಿ.ಮೀ. ಆಗಿದ್ದರೆ ಈ ಬಾರಿ 4223ಮಿ.ಮೀ.ನಷ್ಟು ಮಳೆಯಾಗಿದೆ ಎಂಬುದು ಅಂಕಿಅಂಶಗಳಿಂದ ತಿಳಿದುಬರುತ್ತದೆ.
ಆದರೆ 2023ರಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಜುಲೈ ತಿಂಗಳಲ್ಲಿ ಶೇ.25ರಷ್ಟು ಅಧಿಕ ಮಳೆಯಾಗಿದ್ದು ಬಿಟ್ಟರೆ ಜೂನ್‌ನಿಂದ ಸೆಫ್ಟೆಂಬರ್ ಕೊನೆಯವರೆಗೆ ಶೇ.22ರಷ್ಟು ಮಳೆ ಕೊರತೆ ಜಿಲ್ಲೆಯನ್ನು ಬಾಧಿಸಿತ್ತು. ಅರಬಿ ಸಮುದ್ರದ ಮಡಿಲಿನಲ್ಲಿ, ಪಶ್ಚಿಮ ಘಟ್ಟದ ತಪ್ಪಲಲ್ಲಿದ್ದರೂ ಕಳೆದ ವರ್ಷ ಜಿಲ್ಲೆಯ ಕಾರ್ಕಳ, ಹೆಬ್ರಿ, ಬ್ರಹ್ಮಾವರ ತಾಲೂಕುಗಳು ಬರಪೀಡಿತ ತಾಲೂಕುಗಳಾಗಿ ಗುರುತಿಸಿಕೊಂಡಿದ್ದವು. ಆದರೆ ಈ ಬಾರಿ ಅಂಥ ಒಂದು ಸಾಧ್ಯತೆ ಕಡಿಮೆ ಎಂಬುದು ಈವರೆಗಿನ ಮಳೆಯ ಅವಲೋಕನದಿಂದ ಖಚಿತವಾಗುತ್ತದೆ.