ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ಪೂರೈಕೆಯಲ್ಲಿ ವ್ಯತ್ಯಯದ ಬಗ್ಗೆ ಸಭೆ: ಮೂಲಭೂತ ವ್ಯವಸ್ಥೆ ಮಾಡಿಕೊಳ್ಳಲು ಅದಾನಿ ಸಂಸ್ಥೆಗೆ ಕೋಟ ಸೂಚನೆ
ಉಡುಪಿ, ನ.15: ಅದಾನಿ ಮತ್ತು ಗೇಲ್ ಕಂಪೆನಿಗಳು ತಮ್ಮ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡು, ಅದಾನಿ ಕಂಪೆನಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಜಿಲ್ಲೆಯಲ್ಲಿ ಸಿಎನ್‌ಜಿ ಅನಿಲದ ಪೂರೈಕೆಗೆ ಬೇಕಾದ ಮೂಲಭೂತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸೂಚನೆಗಳನ್ನು ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ಅನಿಲದ ವಿತರಣೆಯಲ್ಲಿ ಆಗುತ್ತಿರುವ ವ್ಯತ್ಯಯದ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಧಿಕಾರಿ, ವಿತರಕ ಸಂಸ್ಥೆಗಳು ಹಾಗೂ ಜಿಲ್ಲೆಯ ಸಿಎನ್‌ಜಿ ಗ್ಯಾಸ್ ಬಂಕ್‌ಗಳ ಮಾಲಕರ ಸಭೆಯಲ್ಲಿ ಅವರು ಚರ್ಚೆಯ ಬಳಿಕ ಈ ಸೂಚನೆಗಳನ್ನು ವಿತರಕ ಅದಾನಿ ಹಾಗೂ ಗೇಲ್ ಕಂಪೆನಿಗಳ ಅಧಿಕಾರಿಗಳಿಗೆ ನೀಡಿದರು.
ಸಭೆಯ ಪ್ರಾರಂಭದಲ್ಲಿ ಮಾತನಾಡಿದ ಸಂಸದ ಕೋಟ, ಈ ಹಿಂದೆ ಕೂಡ ಹಲವು ಭಾರಿ ಸಮಸ್ಯೆಗಳು ಉಂಟಾಗಿದ್ದವು. ಅದು ಇನ್ನೂ ಕೂಡ ಮುಂದು ವರಿಯುತ್ತಿದೆ. ಇದಕ್ಕೆ ಕಾರಣಗಳೇನು ಎಂದು ವಿತರಕ ಕಂಪೆನಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅದಾನಿ ಪವರ್ಸ್ ಕಂಪೆನಿಯ ಕಿಶೋರಕುಮಾರ್, ಮಂಗಳೂರಿನ ಪಣಂಬೂರಿನಲ್ಲಿ ಕೆಐಓಸಿಯ ಸ್ಥಳದಲ್ಲಿ ಪೈಪ್‌ಲೈನ್ ಹಾದು ಹೋಗಬೇಕಿದೆ. ಇದಕ್ಕೆ ಅವರು ಅನುಮತಿ ನೀಡಲು ನಿರಾಕರಿಸುತ್ತಿರು ವುದರಿಂದ ಪೈಪ್ ಲೈನ್ ಮೂಲಕ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈಗ ವಾಹನಗಳ ಮೂಲಕ ಸಾಗಾಟ ಮಾಡಲಾಗುತ್ತಿದೆ. ಇಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಇರುವುದರಿಂದ ವಿಳಂಬವಾಗುತ್ತಿದೆ ಎಂದರು.
ಪೈಪ್‌ಲೈನ್ ಅಳವಡಿಕೆ ಸಮಸ್ಯೆ ಕುರಿತಂತೆ ಈಗಾಗಲೇ ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಮುಖೇನ ಸಮಸ್ಯೆಯ ವರದಿ ಮಾಡಲಾಗಿದೆ. ಅವರು ಈ ಕುರಿತು ಕಾರ್ಯಪ್ರವರ್ತರಾಗಿದ್ದಾರೆ ಎಂದರು.
ಇದಕ್ಕೆ ಉತ್ತರಿಸಿದ ಸಂಸದರು, ಉಡುಪಿ ಜಿಲ್ಲೆಯಲ್ಲಿ 10 ಸಿಎನ್‌ಜಿ ಬಂಕ್ ಗಳಿವೆ. ಅದರಲ್ಲಿ ಎರಡು ಕಾರ್ಯ ನಿರ್ವಹಿಸು ತ್ತಿದೆ. ಪ್ರತಿನಿತ್ಯ 20,500 ಕಿಲೋ ಸಿಎನ್‌ಜಿಗೆ ಬೇಡಿಕೆ ಇದೆ. ಆದರೆ ಈಗಸರಬರಾಜು ಆಗ್ತಾ ಇರೋದು 12,000 ಕೆಜಿ ಮಾತ್ರ. ಈ ಸಮಸ್ಯೆಗೆ ಕಾರಣ ಏನು ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಬ್ರಹ್ಮಾವರದ ಬಂಕ್‌ನ ಮಾಲಕರಾದ ಬಿ.ಎನ್ ಶಂಕರ್ ಪೂಜಾರಿ, 8 ಬಂಕ್‌ಗಳಿಗೆ ಇಬ್ಬರು ಟೆಕ್ನೀಶೀಯನ್ ಇದ್ದಾರೆ. ಪ್ರತಿ ಬಂಕ್‌ಗೆ ಎರಡು ವಾಹನಗಳಂತೆ ವ್ಯವಸ್ಥೆ ಮಾಡಿದ್ದಲ್ಲಿ ಪೂರೈಕೆ ನಿಯಮಿತವಾಗಿರುತ್ತದೆ ಎಂದರು.
ಕುಂದಾಪುರದ ಬಂಕ್ ಮಾಲಕರೊಬ್ಬರು ಮಾತನಾಡಿ ನಗರ ಭಾಗಗಳಲ್ಲಿ ಜಂಬೋ ವಾಹನದ ಮೂಲಕ ಪೂರೈಕೆ ಮಾಡಿದ್ದಲ್ಲಿ ಸಮಸ್ಯೆ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತದೆ ಎಂದರೆ, ಗುಂಡಿಬೈಲಿನ ತೇಜಸ್ ಪಾಲನ್ ಮಾತನಾಡಿ, ಇನ್ನು ಸೀಝನ್ ಆರಂಭಗೊಂಡಂತೆ ಬೇಡಿಕೆ ಕೂಡ ಜಾಸ್ತಿ ಇರುತ್ತದೆ. ಒಂದೂವರೆ ಗಂಟೆಯೊಳಗೆ ಪೂರೈಕೆಯಾದ ಅನಿಲ ಖಾಲಿಯಾಗುತ್ತಿದೆ. ಅಲ್ಲದೇ ಅದಾನಿ ಗ್ಯಾಸ್ ಪೂರೈಕೆಗೆ ಬಳಸುತ್ತಿರುವ ಗನ್ ಕೂಡ ಗುಣಮಟ್ಟ ದಾಗಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಕೂಡಲೇ ಗುಣಮಟ್ಟದ ಗನ್ ನೀಡಬೇಕು ಹಾಗೂ ಅಗತ್ಯವಿರುವ ಹೆಚ್ಚುವರಿ ವಾಹನ ಗಳನ್ನು ವ್ಯವಸ್ಥೆ ಮಾಡಲು ಸೂಚಿಸಿದರು. ಗೇಲ್ ಕಂಪೆನಿಯ ಪ್ರತಿನಿಧಿ ಮಾತನಾಡಿ, ರಾತ್ರಿ ವೇಳೆ ಗ್ಯಾಸ್ ತುಂಬಿಸಿ ಕೊಂಡಿದ್ದಲ್ಲಿ ಸಮಸ್ಯೆಯಾಗುವುದಿಲ್ಲ. ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಅದಾನಿ ಕಂಪೆನಿ ಮಾಡಿಕೊಳ್ಳಬೇಕು ಎಂದರು.
ಗೇಲ್ ಕಂಪೆನಿ ಬಳಿ ಎರಡು ಪೂರೈಕೆ ವ್ಯವಸ್ಥೆ ಇದೆ. ಅದರಲ್ಲಿ ಒಂದನ್ನು ಉಡುಪಿ ವಿಭಾಗಕ್ಕೆ ಮೀಸಲಿಡಲು ಬಂಕ್ ಮಾಲಕರೊಬ್ಬರು ಸೂಚನೆ ನೀಡಿದರು. ಇದಕ್ಕೆ ಆಕ್ಷೇಪಿಸಿದ ಗೇಲ್ ಕಂಪೆನಿಯ ಪ್ರತಿನಿಧಿ ಮಂಗಳೂರಿನಲ್ಲಿ 40 ಸಾವಿರ ಕೆಜಿಗೂ ಮಿಕ್ಕಿ ಪೂರೈಕೆಯಾಗುತ್ತದೆ ಈ ಕಾರಣಕ್ಕೆ ಉಡುಪಿಗೆ ಪ್ರತ್ಯೇಕವಾಗಿ ಮೀಸಲಿಡುವುದಕ್ಕೆ ಸಾಧ್ಯವಿಲ್ಲ ಎಂದರು.
ಕೊನೆಯಲ್ಲಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಅದಾನಿ ಹಾಗೂ ಗೇಲ್ ಕಂಪೆನಿಗಳು ತಮ್ಮ ಸಮಸ್ಯೆ ಗಳನ್ನು ಸೌಹಾರ್ದಯುತ ವಾಗಿ ಬಗೆಹರಿಸಿ, ಜಿಲ್ಲೆಯ ಸಿಎನ್‌ಜಿ ಬಳಕೆದಾರರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳ ಬೇಕು ಎಂದು ಅದಾನಿ ಕಂಪೆನಿಯ ಪ್ರತಿನಿಧಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಜಿ.ಪಂ ಸಿಇಓ ಪ್ರತೀಕ್ ಬಾಯಲ್ ಮುಂತಾದವರು ಉಪಸ್ಥಿತರಿದ್ದರು.