ಉಡುಪಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಿಗೆ, ಮಕ್ಕಳಿಗೆ ಸೂಚನೆಗಳು
ಉಡುಪಿ, ಡಿ.23: ಜಿಲ್ಲೆಗೆ ವಿವಿಧ ರಾಜ್ಯಗಳಿಂದ, ಜಿಲ್ಲೆಗಳಿಂದ ಪ್ರವಾಸಿಗರು ಹಾಗೂ ಶಾಲಾ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆಂದು ಆಗಮಿಸುತ್ತಿದ್ದಾರೆ. ಇಂಥ ಪ್ರವಾಸಿಗರಿಗಾಗಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಕೆಲವು ಸೂಚನೆ ಹಾಗೂ ಎಚ್ಚರಿಕೆಗಳನ್ನು ನೀಡಿದೆ.
ಆಗಮಿಸುವ ಪ್ರವಾಸಿಗರು ಹಾಗೂ ಶಾಲಾ ಮಕ್ಕಳು ಸಮುದ್ರ ತೀರಕ್ಕೆ ಬಂದು ನೀರಿಗೆ ಇಳಿದು ನೀರಿನಲ್ಲಿ ಆಟ ಆಡು ವುದು, ಸ್ನಾನ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಆದರೆ ಬರುವಂತ ಪ್ರವಾಸಿಗರಿಗೆ ನೀರಿನ ಅಬ್ಬರ, ಆಳದ ಬಗ್ಗೆ ತಿಳುವಳಿಕೆ ಇಲ್ಲದೇ ನೀರಿಗೆ ಈಜಲು ಹೋಗಿ ಪ್ರಾಣಾಪಾಯ ತಂದುಕೊಳ್ಳುತ್ತಾರೆ.
ಜಿಲ್ಲೆಯ ಪ್ರವಾಸಿತಾಣಗಳಿಗೆ ಆಗಮಿಸುವ ಪ್ರವಾಸಿಗರು ಅಪಾಯಕಾರಿ ಯಾಗಿರುವ ನದಿ, ಜಲಪಾತ ಹಾಗೂ ಸಮುದ್ರದ ಅಲೆಗಳಿರುವಲ್ಲಿ ತೆರಳಿದಾಗ, ಇಂಥ ಸ್ಥಳಗಳಲ್ಲಿ ಪಾಲಕರು ತಮ್ಮ ಮಕ್ಕಳು ನೀರಿಗೆ ಇಳಿಯದಂತೆ ಹಾಗೂ ಶೈಕ್ಷಣಿಕ ಪ್ರವಾಸಕ್ಕೆ ಬರುವ ಶಾಲಾ-ಕಾಲೇಜುಗಳ ವಿದ್ಯಾರ್ಥಿ ಗಳೊಂದಿಗೆ ಆಗಮಿಸುವ ಶಿಕ್ಷಕರು/ಉಪನ್ಯಾಸಕರು ಹಾಗೂ ಮುಖ್ಯೋಪಾ ಧ್ಯಾಯರು ತಮ್ಮ ಶಾಲಾ-ಕಾಲೇಜು ಮಕ್ಕಳಿಗೆ ಸೂಕ್ತ ತಿಳುವಳಿಕೆಯನ್ನು ನೀಡಿ ನೀರಿಗೆ ಇಳಿಯದಂತೆ ನೋಡಿಕೊಳ್ಳಬೇಕು. ಪ್ರವಾಸದ ಸಂಧರ್ಭದಲ್ಲಿ ಮಕ್ಕಳನ್ನು ಯಾವುದೇ ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು.
ಎಲ್ಲಾ ಸ್ಥಳಗಳಲ್ಲಿ ಪ್ರವಾಸಿ ಉಸ್ತುವಾರಿ ವಹಿಸಿರುವ ಸಿಬ್ಬಂದಿ, ವಿದ್ಯಾರ್ಥಿ ಗಳ ಜೊತೆಗಿದ್ದು ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು ಹೆಚ್ಚಿನ ನಿಗಾ ವಹಿಸಬೇಕು ಹಾಗೂ ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ಅವಘಡಕ್ಕೆ / ಹಾನಿಗೆ ಶಾಲಾ ಮುಖ್ಯಸ್ಥರು ಮತ್ತು ಪ್ರವಾಸದ ಉಸ್ತುವಾರಿ ವಹಿಸಿದ ಸಿಬ್ಬಂದಿಯವರೇ ಜವಾಬ್ದಾರರಾಗಿರುತ್ತಾರೆ.
ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಿದ ಪ್ರಮುಖ ಬೀಚ್‌ಗಳಾದ ಮಲ್ಪೆ ಬೀಚ್, ಕಾಪು ಬೀಚ್, ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್, ಪಡುಬಿದ್ರಿ ಮುಖ್ಯ ಬೀಚ್ ಹಾಗೂ ತ್ರಾಸಿ ಮರವಂತೆ ಬೀಚ್‌ಗಳಲ್ಲಿ ‘ಬಾಥಿಂಗ್ ರೆನ್’ (ಸ್ನಾನ ವಲಯ) ವ್ಯಾಪ್ತಿಯನ್ನು ಗುರುತಿಸಲಾಗಿದ್ದು, ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟ ಬೀಚುಗಳಲ್ಲಿ ‘ಬಾಥಿಂಗ್ ರೆನ್’ ವ್ಯಾಪ್ತಿಯಲ್ಲಿ ನಿಯೋಜಿಸಿದ ಪೊಲೀಸ್, ಲೈಫ್ ಗಾರ್ಡ್, ಪ್ರವಾಸಿ ಮಿತ್ರ ಹಾಗೂ ಭದ್ರತಾ ಸಿಬ್ಬಂದಿಗಳು ನೀಡುವ ಎಚ್ಚರಿಕೆಯ ಸೂಚನೆಯನ್ನು ಪಾಲಿಸುವ ಮೂಲಕ ಪ್ರವಾಸಿ ತಾಣಗಳನ್ನು ದೂರದಿಂದಲೇ ವೀಕ್ಷಿಸಿ ಸಂಭ್ರಮಿಸಿ ಅಲ್ಲಿಂದ ಸುರಕ್ಷಿತವಾಗಿ ತೆರಳುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.