ಪ್ರವಾಸೋದ್ಯಮ ಕೌಶಲ್ಯಾಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ
ಉಡುಪಿ, ಡಿ.23: ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ/ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಫ್ಟ್ ಇನ್‌ಸ್ಟಿಟ್ಯೂಟ್ (ಎಫ್‌ಸಿಐ) ಮೈಸೂರು ಹಾಗೂ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ (ಐಎಚ್‌ಎಂ) ಬೆಂಗಳೂರು ಇವರ ಮೂಲಕ ವಸತಿ ಸಹಿತ ಕಾರ್ಯಕ್ರಮವಾಗಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ.
ಇದಕ್ಕಾಗಿ ರಾಜ್ಯಾದ್ಯಂತದ 20ರಿಂದ 45 ವರ್ಷದೊಳಗಿನ ಪರಿಶಿಷ್ಟ ಜಾತಿಗೆ ಸೇರಿದ 292 ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ 162 ಅಭ್ಯರ್ಥಿಗಳಿಂದ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿ ವಿವರ: ಫುಡ್ ಮತ್ತು ಬಿವರೇಜ್ ಸರ್ವಿಸ್ ಸ್ಟೀವರ್ಡ್ ತರಬೇತಿಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ಗುರಿ -100 ಹಾಗೂ ಪರಿಶಿಷ್ಟ ಪಂಗಡದ- 49 ಅಭ್ಯರ್ಥಿಗಳ ಗುರಿ ನಿಗದಿಪಡಿಸಲಾಗಿದೆ. ಕನಿಷ್ಟ ಎಸೆಸೆಲ್ಸಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿ ಗಳು ಅರ್ಜಿ ಸಲ್ಲಿಸಬಹುದು. ರೂಮ್ ಅಟೆಂಡೆಂಟ್ ತರಬೇತಿಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ಗುರಿ-30 ಹಾಗೂ ಪರಿಶಿಷ್ಟ ಪಂಗಡದ- 19 ಅಭ್ಯರ್ಥಿಗಳ ಗುರಿ ಇದ್ದು, ಕನಿಷ್ಟ ಐದನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಇನ್ನು ಫ್ರಂಟ್ ಆಫೀಸ್ ಅಸೋಸಿಯೇಟ್ ತರಬೇತಿಗೆ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳ ಗುರಿ - 15 ಹಾಗೂ ಪರಿಶಿಷ್ಟ ಪಂಗಡದ - 5 ಅಭ್ಯರ್ಥಿಗಳ ಗುರಿ ನಿಗದಿಪಡಿಸಲಾಗಿದೆ. ಕನಿಷ್ಠ ದ್ವಿತೀಯ ಪಿಯುಸಿ ಉತ್ತೀರ್ಣರಾದವರು ಅರ್ಜಿ ಹಾಕ ಬಹುದು. ಮಲ್ಟಿ ಕ್ಯೂಸೈನ್ ಕುಕ್ ತರಬೇತಿಗೆ ಪರಿಶಿಷ್ಟ ಜಾತಿ ಅಭ್ಯರ್ಥಿಗಳ ಗುರಿ - 147 ಹಾಗೂ ಪರಿಶಿಷ್ಟ ಪಂಗಡದ - 89 ಅಭ್ಯರ್ಥಿಗಳ ಗುರಿ ನಿಗದಿಪಡಿಸಲಾಗಿದ್ದು, ಕನಿಷ್ಠ ಎಂಟನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಜಿಲ್ಲೆಯಲ್ಲಿ ಈ ತರಬೇತಿ ಪಡೆಯಲು ಆಸಕ್ತಿ ಹೊಂದಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಡಿಸೆಂಬರ್ 28 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ, ಮಣಿಪಾಲ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.