ಉಡುಪಿ: ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಕಡ್ಡಾಯ
ಉಡುಪಿ, ಡಿ.23: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಉದ್ದಿಮೆದಾರರು, ನಗರಾಭಿವೃದ್ಧಿ ಇಲಾಖೆಯ ಸುತ್ತೋಲೆಯಂತೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕವಾಗಿ ಪರವಾನಗಿ ಪಡೆಯುವುದು ಕಡ್ಡಾಯವಾಗಿದ್ದು, ಕೋಟ್ಪಾ ಕಾಯ್ದೆಯಂತೆ ನಿಗದಿತ ಶುಲ್ಕ ಪಾವತಿಸಿ ಉದ್ಯಮ ಪರವಾನಿಗೆ ಯನ್ನು ಪಡೆದುಕೊಳ್ಳಬೇಕು ಎಂದು ಪಟ್ಟಣ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.
ಸರಕಾರದ ಸುತ್ತೋಲೆಯಂತೆ ಶಾಲಾ ಕಾಲೇಜು, ದೇವಸ್ಥಾನ, ಆಸ್ಪತ್ರೆ ಹಾಗೂ ಸಂಸ್ಥೆಗಳಿಂದ 100 ಗಜ ಅಂತರದಲ್ಲಿ ಯಾರು ಕೂಡ ತಂಬಾಕು ಉತ್ಪನ್ನಗಳ ಮಾರಾಟವನ್ನು ಮಾಡುವಂತಿಲ್ಲ. ಒಂದುವೇಳೆ ಮಾರಾಟ ಮಾಡುತ್ತಿದ್ದಲ್ಲಿ ಪ್ರಕಟಣೆ ಪ್ರಕಟಗೊಂಡ ತಕ್ಷಣವೇ ಸದ್ರಿ ಉದ್ಯಮವನ್ನು ಸ್ಥಗಿತಗೊಳಿಸಿ ಬೇರೆ ಕಡೆಗೆ ಸ್ಥಳಾಂತರಿಸಬೇಕು.
ಕೋಟ್ಪಾ ಕಾಯ್ದೆಯ ಸೆಕ್ಷನ್ 2,3,4ರಲ್ಲಿ ಸೂಚಿಸಿರುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲಾ ಹೋಟೇಲ್, ಬೇಕರಿ, ದಿನಸಿ ಅಂಗಡಿ, ಖಾದ್ಯ ಪದಾರ್ಥ ಮಾರಾಟ ಅಂಗಡಿಗಳಿಗೆ ಹಾಗೂ ಇತರ ಉದ್ಯಮದಾರರು ಕೋಟ್ಪಾ ಕಾಯ್ದೆಯ ಸೆಕ್ಷನ್ 5ರಲ್ಲಿ ಸೂಚಿಸಿರುವಂತೆ ಧೂಮಪಾನ ಮತ್ತು ತಂಬಾಕು ಸೇವನೆ ಬಗ್ಗೆ ಸೂಚನಾ ಫಲಕವನ್ನು ಕಡ್ಡಾಯವಾಗಿ ಉದ್ಯಮದ ಸ್ಥಳದಲ್ಲಿ ಪ್ರದರ್ಶಿಸಬೇಕು.
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಹಾಗೂ ತಂಬಾಕಿನ ಇತರೇ ಉತ್ಪನ್ನಗಳ ಸೇವನೆ ಮತ್ತು ಯಾವುದೇ ರೀತಿಯ ಮಾದಕ ಪಾನೀಯ ಅಥವಾ ಮಾದಕ ವಸ್ತುಗಳ ಸೇವನೆಯನ್ನು ದ ಸಿಗರೇಟ್ಸ್ ಅಂಡ್ ಅದರ್ ಟೊಬ್ಯಾಕೋ ಪ್ರಾಡಕ್ಟ್ಸ್ (ಪ್ರೋಹಿಬಿಷನ್ ಆಫ್ ಅಡ್ವರ್ಟೈಸ್‌ಮೆಂಟ್ ಅಂಡ್ ರೆಗ್ಯುಲೇಷನ್ ಆಫ್ ಟ್ರೇಡ್ ಅಂಡ್ ಕಾಮರ್ಸ್, ಪ್ರೊಡಕ್ಷನ್, ಸಪ್ಲೈ ಅಂಡ್ ಡಿಸ್ಟ್ರಿಬ್ಯುಷನ್) ಆಕ್ಟ್ 2003 (ಕೇಂದ್ರ ಅಧಿನಿಯಮ 34/2003)ರಲ್ಲಿ ಮತ್ತು ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮ ಗಳು 2021ರ ನಿಯಮ-31ರಂತೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಬಗ್ಗೆ ನಿಯಮ ಉಲ್ಲಂಘಿಸಿದ್ದಲ್ಲಿ ನಿಗದಿತ ದಂಡ ಶುಲ್ಕ ವಿಧಿಸಿ ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ತಂಬಾಕು ಮಾರಾಟಕ್ಕೆ ಸಂಬಂಧಿಸಿದಂತೆ ದೂರುಗಳಿದ್ದಲ್ಲಿ ಸಾರ್ವಜನಿಕರು ‘ಸ್ಟಾಪ್ ಟೊಬ್ಯಾಕೊ’ ಆ್ಯಪ್‌ನಲ್ಲಿ ಪೋಟೋ ಮತ್ತು ವಿಳಾಸ ಸಹಿತ ದೂರನ್ನು ದಾಖಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯತ್ ಆರೋಗ್ಯ ವಿಭಾಗವನ್ನು ಸಂಪರ್ಕಿಸಬಹುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿ ಪ್ರಕಟಣೆ ತಿಳಿಸಿದೆ.