ಯಕ್ಷಗಾನ ಚೌಕಟ್ಟು, ಸಂಪ್ರದಾಯದ ಎಲ್ಲೆ ಮೀರದಿರಲಿ: ತಲ್ಲೂರು
ಉಡುಪಿ: ಯಕ್ಷಗಾನ ಕಲಾವಿದರು ವೇಷತೊಟ್ಟು ರಂಗಸ್ಥಳಕ್ಕೆ ಬಂದಾಗ ತಾವು ನಿರ್ವಹಿಸುತ್ತಿರುವ ಪಾತ್ರದ ಘನತೆಯ ಬಗ್ಗೆ ಅರಿವಿರಬೇಕು. ಯಕ್ಷಗಾನ ಚೌಕಟ್ಟನ್ನು ಬಿಟ್ಟು ಮಾತಿನ ಎಲ್ಲೆ ಮೀರಬಾರದು. ಹಾಸ್ಯ, ಮನೋರಂಜನೆಗೆ ಯಕ್ಷಗಾನದ ಘನತೆಯನ್ನು ಕುಂದಿಸುವ ಕೆಲಸ ಆಗಬಾರದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ರಸರಂಗ ಸಂಸ್ಥೆ ವತಿಯಿಂದ ಕುಂದಾಪುರ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ರವಿವಾರ ಹಮ್ಮಿಕೊಂಡ ಹನುಮದ್ವಿಲಾಸ ಯಕ್ಷಗಾನದ ಪ್ರದರ್ಶನ ಹಾಗೂ ಸಾಧಕ ಕಲಾವಿದರಿಗೆ ಗೌರವಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯಕ್ಷಗಾನದ 60 ವರ್ಷ ಮೇಲ್ಪಟ್ಟು ವೃತ್ತಿಪರ ಕಲಾವಿದರು, ನಿವೃತ್ತಿ ಯಾಗಿರುವ ಕಲಾವಿದರಿಗೆ ಅಕಾಡೆಮಿಯಿಂದ ಗೌರವ ಸಲ್ಲಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಅಲ್ಲದೆ ಭವಿಷ್ಯದಲ್ಲಿ ಪ್ರೇಕ್ಷಕರ ಕೊರತೆಯಾಗದಂತೆ ಮಕ್ಕಳಿಗೆ ಯಕ್ಷಗಾನವನ್ನು ಕಲಿಸಬೇಕಾಗಿದೆ. ಮಕ್ಕಳಿಗೆ ಯಕ್ಷಗಾನವನ್ನು ಕಲಿಸಿ ಅವರಲ್ಲಿ ನೈತಿಕ ಮೌಲ್ಯಗಳನ್ನು, ಸಂಸ್ಕಾರವನ್ನು ತುಂಬುದಕ್ಕೆ ಇದೊಂದು ಒಳ್ಳೆಯ ಕಾರ್ಯಕ್ರಮವಾಗಿದೆ ಎಂದರು.
ಯಕ್ಷಗಾನ ಸಂಘಟಕ ಎಚ್. ಜನಾರ್ದನ ಹಂದೆ, ರಸರಂಗದ ಮುಖ್ಯಸ್ಥೆ ಸುಧಾ ಮಣೂರು ಮಾತನಾಡಿದರು. ಮಂದಾರ್ತಿ ಮೇಳದ ಮೇಳದ ಹಿರಿಯ ಕಲಾವಿದ ಚಂದ್ರ ಕುಲಾಲ ನೀರ್ಜಿಡ್ಡು ಅವರಿಗೆ ಕಲಾ ಗೌರವ ಸಮರ್ಪಿಸಲಾಯಿತು. ಅಲ್ಲದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾಗವತ ಉದಯಕುಮಾರ್ ಹೊಸಾಳ ಅವರನ್ನು ಗೌರವಿಸಲಾಯಿತು.
ಯಕ್ಷಗಾನ ಪ್ರೇಮಿ ಮೋಹನ್ ಚಂದ್ರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಾಗವತ ಉದಯ ಕುಮಾರ್ ಹೊಸಾಳ ಮತ್ತು ಬಳಗದಿಂದ ಹನುಮ ದ್ವಿಲಾಸ ಎಂಬ ಯಕ್ಷಗಾನ ಪ್ರದರ್ಶನ ಸಭಿಕರ ಮನರಂಜಿಸಿತು. ರಸರಂಗದ ಮುಖ್ಯಸ್ಥೆ ಸುಧಾ ಮಣೂರು ಕಾರ್ಯಕ್ರಮ ನಿರೂಪಿಸಿದರು.